ಮಂಗಳೂರು: ʻಸಂಗೀತ್ ಘರ್ʼ ಬ್ಯಾನರ್ನಡಿಯಲಿ ತಯಾರಾಗುವ ಯೊಡೆಲಿಂಗ್ ಕಿಂಗ್ ಮೆಲ್ವಿನ್ ಪೆರಿಸ್ ಮತ್ತು ನಿರ್ದೇಶಕ ಜೋಯಲ್ ಪಿರೇರಾ ಅವರ ಚೊಚ್ಚಲ ಕೊಂಕಣಿ ಚಲನಚಿತ್ರ ‘ಪಯಣ್’ (ಪ್ರಯಾಣ) ಇದರ ಚಿತ್ರೀಕರಣ ಏಪ್ರಿಲ್ 19 ರಂದು ಮಂಗಳೂರಿನ ʻವೈಟ್ ಡವ್ಸ್ʼ ನಿರಾಶ್ರಿತರ ಆಶ್ರಮದಲ್ಲಿ ಆರಂಭಗೊಂಡಿತು.
ನೀಟಾ ಪೆರಿಸ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ʻಸಂಗೀತ್ ಗುರುʼ ಎಂದೇ ಪ್ರಸಿದ್ಧರಾಗಿರುವ ಜೋಯಲ್ ಪಿರೇರಾ ಅವರು ನಿರ್ದೇಶಿಸುತ್ತಿದ್ದಾರೆ. ಚಲನಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ಚಿತ್ರದ ಗೀತೆ ರಚನೆ ಮತ್ತು ರಾಗಗಳು ಮೆಲ್ವಿನ್‍ಪೆರಿಸರದಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ರೋಶನ್ ಡಿಸೋಜಾ, ಆಂಜೆಲೋರ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರೀಕರಣಕ್ಕೆ ಮುನ್ನ ಕುಲಶೇಖರ ಚರ್ಚಿನ ಧರ್ಮಗುರು ವಂ. ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಪ್ರಾರ್ಥನೆ ನೆರವೇರಿಸಿದರು. ವೈಟ್ ಡವ್ಸ್ನ ಸಂಸ್ಥಾಪಕಿ ಕೊರಿನ್ ರಾಸ್ಕ್ವಿನ್ಹಾ ಅವರು ಕ್ಲಾಪ್ ಹೊಡೆಯುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಭಕ್ತಿ ಸಂಗೀತ ಸೇರಿದಂತೆ ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳಿಗಾಗಿ ಮೆಲ್ವಿನ್‍ಪೆರಿಸ್ ಅವರನ್ನು ಶ್ಲಾಘಿಸಿ ಮಾತನಾಡಿದ ಅವರು ʻಓರ್ವ ಉತ್ತಮ ಗೀತೆ ರಚನೆಕಾರ, ಗಾಯಕ ಹಾಗು ಇನ್ನೋರ್ವ ಮಾಂತ್ರಿಕ ಸಂಗೀತಗಾರ, ಈ ಜೋಡಿಯಿಂದ ನಿರ್ಮಾಣಗೊಳ್ಳುತ್ತಿರುವ ಓರ್ವ ಗಾಯಕನ ಜೀವನ ಪ್ರಯಾಣವನ್ನು ಚಿತ್ರಿಸುವ ಚಿತ್ರವು ಕೊಂಕಣಿ ಚಿತ್ರರಂಗದಲ್ಲಿ ಹೊಸ ಇತಿಹಾಸವೊಂದನ್ನು ನಿರ್ಮಿಸುವಂತಾಗಲಿʼ ಎಂದು ಶುಭ ಕೋರಿದರು.
ಚಿತ್ರದ ತಾರಾಗಣದಲ್ಲಿ ಬ್ರಾಯಾನ್ ಸಿಕ್ವೇರಾ, ಡಾ. ಜಾಸ್ಮಿನ್ ಡಿಸೋಜಾ ಮತ್ತು ಕೇಟ್ ಪಿರೇರಾ ಪ್ರಮುಖ ಪಾತ್ರಗಳಲ್ಲಿದ್ದಾರೆ, ಜೊತೆಗೆ ಶೈನಾ ಡಿಸೋಜಾ, ರೈನೆಲ್ ಸಿಕ್ವೇರಾ, ಲೆಸ್ಲಿ ರೆಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಲಿಕೆ, ಆಲ್ಬರ್ಟ್ ಪೆರಿಸ್, ಜೀವನ್ ವಾಸ್, ಮೆಲಿಶಾ ಪಿಂಟೊ ಮತ್ತು ಜೋಸ್ಸಿ ರೆಗೊ, ಇತರರಿದ್ದಾರೆ.ತಾಂತ್ರಿಕ ಸಿಬ್ಬಂದಿ: ಛಾಯಾಗ್ರಹಣ: ವಿ ರಾಮಾಂಜನೇಯ, ಸಂಕಲನ ಮತ್ತು ಸಹ-ನಿರ್ದೇಶನ: ಮೆವಿಲ್ ಜೋಯಲ್ ಪಿಂಟೊ.