26.2 C
Karnataka
Thursday, April 3, 2025

ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ-ವಿಚಾರ ಸಂಕಿರಣ

ಮಂಗಳೂರು: ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗದೆ ಭವಿಷ್ಯದ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿವೆ. ಈ‌ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕಾರ್ಯವನ್ನು ಶಾಲಾ ಕಾಲೇಜುಗಳು ವಹಿಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡು ಹೇಳಿದ್ದಾರೆ.
ಅವರು ಶನಿವಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ
ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ-ವಿಚಾರ ಸಂಕಿರಣವನ್ನು ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನಗಳ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಕೇವಲ ಓದುವ ಕಡೆಗೆ ಗಮನ ಕೊಡಬೇಕು. ಮಾದಕ ವ್ಯಸನ ರೂಪಿಸಲು ಅನೇಕ ಜಾಲಗಳಿವೆ. ಅಂತಹ ಯಾವುದೇ ರೀತಿಯ ಹಾದಿ ತಪ್ಪಿಸುವ ದುಶ್ಚಟಗಳಿಗೆ ಒಳಗಾಗಬಾರದು ಎಂದು ಅವರು ಹೇಳಿದರು.
ಇತ್ತೀಚೆಗೆ ಮಂಗಳೂರು ನಗರ ಪೊಲೀಸರು ಬೃಹತ್ ಮಟ್ಟದ ಡ್ರಗ್ಸ್ ವಶಪಡಿಸುವ ಮೂಲಕ ನಗರದಲ್ಲಿ ಮಾದಕವಸ್ತು ಹಂಚಿಕೆಯನ್ನು ತಡೆಗಟ್ಟಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂಧಿಸುವುದಾಗಿ ಅವರು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಮಾತನಾಡಿ, ಮಾದಕ ವ್ಯಸನಗಳು ತೀವ್ರವಾಗಿ ಹಬ್ಬುತ್ತಿದೆ. ಯುವಕರು ಬೇಗನೆ ಮಾದಕ ದ್ರವ್ಯಗಳನ್ನು ಬಳಸಲು ಪ್ರಾರಂಭಿಸಿದರೆ, ಅವರು ಅವುಗಳನ್ನು ಬಳಸುವುದನ್ನು ಮುಂದುವರೆಸುವ ಮತ್ತು ನಂತರದ ಜೀವನದಲ್ಲಿ ವ್ಯಸನಿಯಾಗುವ ಸಾಧ್ಯತೆಗಳಿವೆ. ಯುವಜನರ ಮೆದುಳು 20ರ ಹರೆಯದವರೆಗೂ ಬೆಳೆಯುತ್ತಲೇ ಇರುತ್ತದೆ.ಕೆಲವೊಂದು ಕೆಟ್ಟ ದುಶ್ಚಟದ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ, ಕುತೂಹಲ ಇರುತ್ತದೆ. ಆದರೆ ಅದರ ಪರಿಣಾಮದ ಅರಿವು ಯುವಜನತೆಗೆ ಇರುವುದಿಲ್ಲ. ಯುವಕರಿಗೆ ಒಳ್ಳೆ ಸಂದೇಶಗಳನ್ನು ನೀಡಬೇಕು. ನಮ್ಮ ಮನಸ್ಸನ್ನು ಕೆಟ್ಟ ವಿಚಾರಗಳಿಂದ ತುಂಬಬಾರದು. ಅನೇಕ ಜನ ತಮ್ಮ ಸಂಪಾದನೆಯನ್ನು ಡ್ರಗ್ಸ್, ಮದ್ಯಪಾನ, ಧೂಮಪಾನ ಮುಂತಾದ ಕೆಟ್ಟ ಚಟುವಟಿಕೆಗಳಿಗೆ ಖರ್ಚು ಮಾಡುತ್ತಿದ್ದಾರೆ. ಯುವಜನತೆ ಒಳ್ಳೆ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು.ತಮ್ಮ ಅಮೂಲ್ಯ ವಾದ ಜೀವನದ ಸಮಯವನ್ನು ಯಾವುದೇ ಕೆಟ್ಟ ಚಟುವಟಿಕೆಗೆ ವ್ಯಯ ಮಾಡಬಾರದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಪ್ರೊ. ಗಣಪತಿ ಗೌಡ. ಎಸ್ ಮಾತನಾಡಿ, ಮಾದಕ ವ್ಯಸನಗಳಂತಹ ಕಾನೂನು ಬಾಹಿರ ಘಟನೆಗಳನ್ನು ಹತ್ತಿಕ್ಕಬೇಕು. ದುಶ್ಚಟಗಳಿಗೆ ಒಳಗಾಗದೆ ಜವಾಬ್ದಾರಿಯುತವಾದ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿ. ವಿ ಕಾಲೇಜು ಎನ್. ಎಸ್. ಎಸ್ ಅಧಿಕಾರಿ ಡಾ. ಗಾಯತ್ರಿ ಎನ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ. ಎ ಖಾದರ್ ಶಾ ಸ್ವಾಗತಿಸಿ, ವಿ. ವಿ ಕಾಲೇಜು ಎನ್.ಎಸ್.ಎಸ್ ಅಧಿಕಾರಿ ಡಾ. ಸುರೇಶ್ ವಂದಿಸಿದರು. ಹಿರಿಯ ಕಲಾವಿದ ಗಿರೀಶ್ ನಾವಡ ನಿರೂಪಿಸಿದರು.ಇದಕ್ಕೂ ಮೊದಲು ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕಲಾ ಪ್ರದರ್ಶನ ನಡೆಯಿತು.

 ill effects of alcohol and drugs -seminar 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles