ಮಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಸೆ.22ರಂದು ಬೆಳಗ್ಗೆ 10.30ಕ್ಕೆ ನಗರದ ಹಂಪನಕಟ್ಟೆಯ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಝೇವಿಯರ್ ಡಿಸೋಜ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಹಾಗೂ ಹೊಸದಿಲ್ಲಿಯ ಜವಾಹರ್ ಲಾಲ್ ನೆಹರೂ ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ವಲೇರಿಯನ್ ರೋಡ್ರಿಗಸ್ ನೂತನ ಸಂಘ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಯರಾಜ್ ಅಮೀನ್ ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರುಗಳಾದ ಪ್ರೊ.ರಾಜಾರಾಮ್ ತೋಳ್ಪಾಡಿ, ಪ್ರೊ.ಜಮೀಲ್ ಅಹಮ್ಮದ್, ಪ್ರೊ.ಜೆ.ಎಸ್.ಸದಾನಂದ ಹಾಗೂ ಪ್ರೊ.ದಯಾನಂದ ಮಾನೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯ ಕ್ಯಾಂಪಸ್‍ನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ (ಪಿಎಚ್‍ಡಿ) ವಿದ್ಯಾರ್ಥಿಗಳು ಸೇರಿ ಸುಮಾರು 1400ಕ್ಕೂ ಅಧಿಕ ಮಂದಿ ಅಧ್ಯಯನ ಮಾಡಿದ್ದು, ಅವರನ್ನೆಲ್ಲ ಪತ್ರ ಮುಖೇನ ಸಂಪರ್ಕ ಮಾಡಲಾಗಿದೆ. ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವದ ಅಭಿಯಾನ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ.ದಯಾನಂದ ನಾಯ್ಕ್, ಖಜಾಂಜಿ ಪ್ರವೀಣ್ ಬಂಗೇರಾ, ಕಾನೂನು ಸಲಹೆಗಾರ ಚಂದ್ರಹಾಸ್ ಕದ್ರಿ, ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.