ಮ೦ಗಳೂರು: ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮಗ್ರ ಆರೋಗ್ಯವ್ಯವಸ್ಥೆ ನೀಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ, ಡಯಾಲಿಸಿಸ್ ಕೇಂದ್ರ, ಆಯುಷ್ ಆಸ್ಪತ್ರೆಯ ಕಟ್ಟಡ ಮೊದಲ ಮಹಡಿ ಶಂಕುಸ್ಥಾಪನೆ, ಶವಾಗಾರ ಕಟ್ಟಡ, ಬಿಪಿಸಿಎಲ್ ನೆರವಿನ ಪುನಶ್ಚೇತನ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಉಳ್ಳಾಲದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಬೇಕೆಂದು ಸಾಕಷ್ಟು ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಯೆನಪೋಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಡಯಾಲಿಸಿಸ್ ಕೇಂದ್ರ ನಿವ೯ಹಿಸಲಾಗುವುದು ಎಂದು ಅವರು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಉಳ್ಳಾಲ ಆಸ್ಪತ್ರೆಯನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದಜೆ೯ಗೇರಿಸಲಾಗಿದೆ. ಇಲ್ಲಿ ದೊರಕುತ್ತಿರುವ ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದ ಹಿಂದೆ ಪ್ರತೀ ದಿನ 30ರಷ್ಟಿದ್ದ ಹೊರರೋಗಿಗಳ ಸಂಖ್ಯೆ ಸುಮಾರು 400 ಕ್ಕೇರಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸುಸಜ್ಜಿತವಾದ ಉಳ್ಳಾಲ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿಗೆ ವೈದ್ಯರು ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಿಗೆ ಸಿಬ್ಬಂಧಿ ಒದಗಿಸಲು ಒತ್ತು ನೀಡಲಾಗಿದೆ. ಆರೋಗ್ಯ ಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳು ಸುಧಾರಣೆಗೊಂಡಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಿದರೆ ಜನಸಾಮಾನ್ಯರಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮೂಡಾ ಅಧ್ಯಕ್ಷ ಸದಾಶಿವ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಯೆನಪೋಯಾ ಅಬ್ದುಲ್ಲಾ ಕುಂಞಿ, ನಗರಸಭೆ ಅಧ್ಯಕ್ಷೆ ಶಶಿಕಲಾ, ಬಿಪಿಸಿಎಲ್ ಅಧಿಕಾರಿ ಮೀರಾ ಸಿಂಗ್, ಯೆನಪೋಯಾ ವಿವಿ ಕುಲಪತಿ ಅಬ್ದುಲ್ಲಾ ಕುಂಞಿ ಮತ್ತಿತರರು ಇದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸ್ವಾಗತಿಸಿದರು.
