29.9 C
Karnataka
Monday, March 3, 2025

ರಂಗಮಂದಿರ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ನೀಡಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು: ಮಂಗಳೂರು ನಗರದಲ್ಲಿ ಬಹುನಿರೀಕ್ಷಿತ ರಂಗಮಂದಿರ ನಿರ್ಮಾಣಕ್ಕೆ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಅವರು ಬುಧವಾರ ರಂಗಮಂದಿರ ನಿರ್ಮಾಣ ಕುರಿತು ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈಗ ರಂಗಮಂದಿರ ನಿರ್ಮಾಣ ಸಂಬಂಧ ರೂ. 9.95 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಸಂಬಂಧ ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಇಂದು ಚರ್ಚಿಸಿದ್ದು, ಶೀಘ್ರದಲ್ಲಿ ಸರ್ಕಾರದಿಂದ ಅನುಮೋದನೆ ದೊರೆಕಲಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರದ ಅನುಮೋದನೆ ನಂತರ ಮಂಗಳೂರು ಮಹಾನಗರಪಾಲಿಕೆಯು ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸಚಿವ ತಿಳಿಸಿದರು. ರಂಗಮಂದಿರ ಯೋಜನೆಯ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಯೋಜನೆಯ ವಿನ್ಯಾಸದ ಕುರಿತು ಚರ್ಚಿಸಿದರು. ಸಂಪೂರ್ಣ ಸುಸಜ್ಜಿತವಾದ ರಂಗಮಂದಿರ ನಿರ್ಮಾಣವಾಗಬೇಕಿದ್ದು, ಯಾವುದೇ ಕೊರತೆ ಇಲ್ಲದಂತೆ ಪೂರ್ಣಗೊಳಿಸಬೇಕು. ಕಲಾ ಚಟುವಟಿಕೆಗಳಿಗೆ ಪೂರಕವಾದ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಾಮಗಾರಿ ನಡೆಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಲಭ್ಯವಿರುವ 9.95 ಕೋಟಿ ರೂ. ಅನುದಾನವನ್ನು ಬಳಸಿಕೊಂಡು ರಂಗಮಂದಿರವನ್ನು ಪೂರ್ಣಗೊಳಿಸಬೇಕು. ಮುಂದಿನ ಆಂತರಿಕ ವಿನ್ಯಾಸ, ಧ್ವನಿ ಬೆಳಕು, ಹಾಗೂ ಇತರ ಅಂತಿಮ ಕಾರ್ಯಗಳಿಗೆ ಬೇಕಾಗುವ ಹೆಚ್ಚುವರಿ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಮಹಾನಗರಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಗಳು ಬಿಡುಗಡೆ ಮಾಡಲು ಅಗತ್ಯ ಕ್ರಮ ವಹಿಸುವಂತೆ ಉಸ್ತುವಾರಿ ಸಚಿವರು ತಿಳಿಸಿದರು.
ನಗರದ ಬೋಂದೆಲ್‍ನ ಈ ಜಾಗವು ರಂಗಮಂದಿರ ನಿರ್ಮಾಣಕ್ಕೆ ಸೂಕ್ತವಾಗಿರುವುದರಿಂದ ಇದಕ್ಕೆ ಸಂಪರ್ಕ ರಸ್ತೆ ಹಾಗೂ ಇತರ ಮೂಲಸೌಕರ್ಯಗಳನ್ನು ಯೋಜನೆಯಲ್ಲಿ ಸೇರಿಸಿಕೊಳ್ಳುವಂತೆ ಉಸ್ತುವಾರಿ ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್ ಎಂ.ಪಿ. ಅವರು ರಂಗಮಂದಿರದ ಯೋಜನೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಜಿಲ್ಲಾ ವಾರ್ತಾಧಿಕಾರಿ ಬಿ. ಎ ಖಾದರ್ ಶಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles