ಮಂಗಳೂರು: ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದವರು ಎನ್ನುತ್ತಾರೆ, ಅದು ನಿಜ ಎಂದಾದಲ್ಲಿ ನೀವು ಬಂಟರ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ಬಂಟರ ನಿಗಮ ಸ್ಥಾಪಿಸಿ ನುಡಿದಂತೆ ನಡೆಯಿರಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಸಂಘಕ್ಕೆ ಇದುವರೆಗೆ ಯಾವ ಸರಕಾರದಿಂದಲೂ ಸಹಕಾರ ಸಿಕ್ಕಿಲ್ಲ. ಬಂಟ ಸಮುದಾಯ ನೋಡಲು ಬಲಿಷ್ಠ ಸಮಾಜ. ಆದರೆ ನಮ್ಮಲ್ಲೂ ಶೇ50ಕ್ಕಿಂತ ಅಧಿಕ ಕಡುಬಡವರಿದ್ದಾರೆ. ದೊಡ್ಡವರಿಗೆ ಸಮುದಾಯದಲ್ಲಿ ಕಷ್ಟದಲ್ಲಿರುವವರ ಬಗ್ಗೆ ಗೊತ್ತಿಲ್ಲ. ಆದರೆ ನಮಗೆ ಗೊತ್ತಿದೆ. ಜಾಗತಿಕ ಬಂಟರ ಸಂಘಕ್ಕೆ ಯಾವುದೇ ಆದಾಯವಿಲ್ಲ. ಇತರರಲ್ಲಿ ಹಣ ಸಂಗ್ರಹಿಸಿ ಸಹಾಯ ಮಾಡುತ್ತಿದ್ದೇವೆ. ಈ ಕಾರಣದಿಂದ ನಮಗೂ ನಿಗಮ, ಮೀಸಲಾತಿ ಬೇಕು ಎಂದು ತಿಳಿಸಿದರು.
ನಮಗೆ ಬಿಜೆಪಿ, ಕಾಂಗ್ರೆಸ್ ಎಲ್ಲವೂ ಸಮಾನ. ಬಂಟ ಜನಪ್ರತಿನಿಧಿಗಳು ರಾಜಕೀಯವಾಗಿ ಹೇಳಿಕೆ ನೀಡುವ ಬದಲು ನಿಮಗೂ ಜವಾಬ್ದಾರಿ ಇದೆ. ಅವರು ನಮ್ಮ ಬೇಡಿಕೆ ಈಡೇರಿಸಲು ಯಾವ ರೀತಿ ಸ್ಪಂದಿಸಿದ್ದೀರಿ ಎನ್ನುವ ಮಾಹಿತಿಯಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನಳಿನ್ ಕುಮಾರ್ ಕಟೀಲ್ ಅವರನ್ನು ಮೂರ್ನಾಲ್ಕು ಬಾರಿ ಭೇಟಿ ಮಾಡಿ ನಿಗಮಕ್ಕಾಗಿ ಮನವಿ ಸಲ್ಲಿಸಿದ್ದೆವು. ಕಾಂಗ್ರೆಸ್ ಸರಕಾರ ಬಂದ ಬಳಿಕ ರಮಾನಾಥ ರೈ, ಮಂಜುನಾಥ ಭಂಡಾರಿ, ಅಶೋಕ್ ರೈ, ಮಿಥುನ್ ರೈ ಸಹಿತ ಇತರರನ್ನು ಭೇಟಿಯಾಗಿ ಮಾಡಿ ಮನವಿ ಮಾಡಿದ್ದೇವೆ. ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ವಿಶ್ವ ಬಂಟರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದರೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವನೆ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹರೀಶ್ ಶೆಟ್ಟಿ ತಿಳಿಸಿದರು.
ಕಳೆದ ವರ್ಷ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ಉದ್ಘಾಟಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂಪಾಯಿಗಳನ್ನು ಮೀಸಲಿರಿಸುದಾಗಿ ಘೋಷಿಸಿದ್ದರೂ ಅವರೇ ಮಂಡಿಸಿದ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿಗೆ ಯಾವುದೇ ಅನುದಾನ, ಅಭಿವೃದ್ಧಿ ನಿಗಮಕ್ಕೆ ಅವಕಾಶ ನೀಡದೆ ಬಂಟ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ವಿಚಾರದಲ್ಲಿ ಬಂಟ ಶಾಸಕರೂ ದ್ವನಿ ಎತ್ತಲಿಲ್ಲ ಎಂದು ಖೇದ ವ್ಯಕ್ತಪಡಿಸಿದ ಹರೀಶ್ ಶೆಟ್ಟಿ, ನಿಗಮ ಸ್ಥಾಪನೆಗಾಗಿ ಸರಕಾರಕ್ಕೆ ಡೆಡ್‌ಲೈನ್ ಕೊಡುವುದಿಲ್ಲ. ಸರಕಾರ ಬಂದು ವರ್ಷ ಮಾತ್ರ ಆಗಿದೆ. ಚುನಾವಣೆಗೆ ಮೊದಲು ಇನ್ನೊಮ್ಮೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ ಎಂದು ಮುಂದಿನ ನಡೆಯ ಬಗ್ಗೆ ತಿಳಿಸಿದರು.
ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಮಾಧ್ಯಮ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.