ಮಂಗಳೂರು: ಜೀವ ಜಲ ನೀರಿನ ಮಹತ್ವದ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘’ಮಹಿಳೆಯರಿಗಾಗಿ ನೀರು, ನೀರಿಗೆ ಮಹಿಳೆಯರು’’ ಎಂಬ ಧ್ಯೇಯದೊಂದಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನಂತೆ ಅಮೃತ್ 2.0 ಯೋಜನೆಯಡಿ ದೇಶದಾದ್ಯಂತ ನವೆಂಬರ್ 7ರಿಂದ 9ರವರೆಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನವನ್ನು ಸ್ವಸಹಾಯ ಸಂಘದ ಸದಸ್ಯರಿಗೆ ಜಲ ದೀಪಾವಳಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಳ್ಳಾಲ ನಗರಸಭೆಯ ಸ್ವಸಹಾಯ ಸಂಘಗಳ 30 ಸದಸ್ಯರ ತಂಡಗಳು ನವೆಂಬರ್ 9 ರಂದು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಳ್ಳಾಲ ನಗರಸಭೆಯಿಂದ ಬೆಳಗ್ಗೆ 10 ಗಂಟೆಗೆ ಹೊರಡಲಿದ್ದು ತುಂಬೆಯಲ್ಲಿರುವ ಜಲ ಸಂಸ್ಕರಣ ಘಟಕದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಾಗೂ ಜಲಸಂಸ್ಕಾರ ಘಟಕದ ಕಾರ್ಯಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ತೆದುಕೊಳ್ಳಲಾಗುವ ಕ್ರಮಗಳು, ಶುದ್ಧಿಕರಣ ಹಾಗೂ ಸರಬರಾಜು ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಸದ್ಭಳಕೆ, ಮಿತಬಳಕೆ, ಸಂರಕ್ಷಣೆ ಕುರಿತಾಗಿ ಜನಸಾಮನ್ಯರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರು, ಮೇಯರ್ ಮತಿತ್ತರರು ಭಾಗವಹಿಸುವರು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.