ಮ೦ಗಳೂರು: ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 277 ನೇ ಕಾರ್ಯಕ್ರಮವು ಜನವರಿ 5 ರಂದು ಶಕ್ತಿನಗರದ ಕಲಾಂಗಣದಲ್ಲಿ 6.30 ಗಂಟೆಗೆ ನಡೆಯಲಿದೆ. ಒಂಬತ್ತು ವರ್ಷ ಪ್ರಾಯದ ಮೂಡಬಿದ್ರೆ ತಾಕೊಡೆಯ ಆಲನಿ ಲಿಯೊರಾ ಡಿಸೋಜ ಈ ಕಾರ್ಯಕ್ರಮ ನೀಡಲಿದ್ದು, ಆಕೆ ತಿಂಗಳ ವೇದಿಕೆ ಮುನ್ನಡೆಸುವ ಅತೀ ಚಿಕ್ಕ ವಯಸ್ಸಿನ ಕಲಾವಿದೆಯಾಗಲಿದ್ದಾಳೆ ಎ೦ದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. –
ಮೂಡಬಿದ್ರೆಯ ಕಾರ್ಮೆಲ್ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಬಹುಮುಖಿ ಪ್ರತಿಭಾವಂತೆ ಆಲನಿ ಕಲಿಕೆಯಲ್ಲಿ ಮುಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಡುಗಾರಿಕೆಯ ಮೂಲಕ ಜನಮೆಚ್ಚುಗೆ ಗಳಿಸಿದ್ದಾಳೆ. ಪಿಯಾನೊ, ವಯೊಲಿನ್, ಗಿಟಾರ್, ಕೀಬೋರ್ಡ್, ಶಾಸ್ತ್ರೀಯ ಗಾಯನ ಹೀಗೆ ಹಲವು ಸ್ತರಗಳಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ದಾಯ್ಜಿವರ್ಲ್ಡ್ ವಾಹಿನಿಯ `ಗಾಯಾನ್ ಆನಿ ಗಜಾಲಿ’, 286ನೇ ವಿಲ್ಫಿ ನೈಟ್, ನಿಹಾಲ್ ತಾವ್ರೊ ಸಂಗೀತ ರಸಮಂಜರಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತನ್ನ ಗಾಯನ ಪ್ರತಿಭೆಯನ್ನು ತೋರಿಸಿದ್ದಾಳೆ. ಅವಳ ಪ್ರತಿಭೆಯನ್ನು ಗುರುತಿಸಿ ಮಾಂಡ್ ಸೊಭಾಣ್ ಇಂತಹ ಬಹುದೊಡ್ಡ ಅವಕಾಶ ನೀಡಿದೆ ಎ೦ದರು..
ಕಾರ್ಯಕ್ರಮದಲ್ಲಿ ಆಕೆ ಚಾಫ್ರಾ ಡಿಕೋಸ್ತಾ, ವಿಲ್ಫಿ ರೆಬಿಂಬಸ್, ಕ್ಲೊಡ್ ಡಿಸೋಜ, ಕ್ರಿಸ್ ಪೆರಿ, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್ ಮತ್ತು ಲಾಯ್ಡ್ ರೇಗೊ ಹೀಗೆ ಕೊಂಕಣಿಯ ಮೇರು ಕವಿಗಳು ಹಾಗೂ ಸಂಗೀತಗಾರರ ರಚನೆಗಳನ್ನು ಹಾಡಲಿದ್ದಾಳೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಕಲಾಂಗಣ್ ಚೇರ್’ಮ್ಯಾನ್ ರೊನಾಲ್ಡ್ ಮೆಂಡೊನ್ಸಾ ಮುಂಬಯಿ ಮತ್ತು ವಿಜಯ್ ಡಿಸೋಜ ದುಬಾಯಿ ಇವರು ಗೌರವ ಅತಿಥಿಗಳಾಗಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಪರವಾಗಿ ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿರುವರು.ಯುವ ಸಂಗೀತಗಾರ ಮೇವಿಶ್ ಇವರ ಸಂಗೀತ ನಿರ್ದೇಶನದಲ್ಲಿ ಸಚಿನ್ ಸಿಕ್ವೇರಾ (ಡ್ರಮ್ಸ್), ಜೇಸನ್ ಡಿಸೋಜ (ಲೀಡ್ ಗಿಟಾರ್), ಆಶ್ವಿನ್ ಕೊರೆಯಾ (ಬೇಸ್ ಗಿಟಾರ್), ಶೊನ್ ಬ್ರಾಸ್ಲಿನ್ (ವಯೊಲಿನ್), ಅಶ್ವಿಲ್ ಕುಲಾಸೊ (ಕೀಬೋರ್ಡ್) ಸಂಗೀತ ನೀಡಲಿದ್ದಾರೆ.
ಖ್ಯಾತ ಹಿಂದೂಸ್ತಾನಿ ಗಾಯನ ತರಬೇತುದಾರರಾದ ಶಿಲ್ಪಾ ಕುಟಿನ್ಹಾ ಇವರು ತರಬೇತಿ ನೀಡಿದ್ದು, ಬ್ಲೂ ಏಂಜಲ್ಸ್ ಕೊಯರ್ ತಂಡ ಮತ್ತು ಆರ್ವಿನ್ ಡಿಕುನ್ಹಾ ಹಿನ್ನೆಲೆಯಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮ ನಿರೂಪಣೆಯಲ್ಲಿ ರೋಶನ್ ಕುಲ್ಶೇಕರ್ ಇವರೊಡನೆ ಎಳೆಯರಾದ ಸಂಜನಾ ರಿವಾ ಮತಾಯಸ್, ಏಂಜಲ್ ಮೇಘನ್ ಕುಟಿನ್ಹಾ, ಅನಿಕಾ ಡಿಸೋಜ ಮತ್ತು ಶನನ್ ಡಿಕೋಸ್ತಾ ಸಹಕರಿಸುವರು.
ಆಲನಿಯ ಗಾಯನಕ್ಕಾಗಿ ಪ್ರಪ್ರಥಮವಾಗಿ ಪಾರಿತೋಷಕ ನೀಡಿ ಪ್ರೋತ್ಸಾಹಿಸಿದ ನೋರಿನ್ ಮೆಂಡೊನ್ಸಾ ಇವರ ಸ್ಮರಣಾರ್ಥ ಈ ಸಂಗೀತ ಸಂಜೆ ಆಯೋಜಿಸಲಾಗಿದೆ. ಕೊಂಕಣಿ ಪ್ರದರ್ಶನ ಕಲೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ 2002 ಜನವರಿ 6 ರಿಂದ ಆರಂಭವಾದ ತಿಂಗಳ ವೇದಿಕೆಯಲ್ಲಿ, ಕಳೆದ 23 ವರ್ಷಗಳಲ್ಲಿ ಕೊಂಕಣಿ ಸಂಗೀತ, ಗಾಯನ, ನಾಟಕ, ನೃತ್ಯ, ಯಕ್ಷಗಾನ, ಹಾಸ್ಯ ಮತ್ತು ವಿವಿಧ ಜನಪದ ಕಲೆಗಳು ಹೀಗೆ ಎಲ್ಲಾ ರೀತಿಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.
ಎ೦ದವರು ವಿವರಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಕಲಾವಿದೆ ಆಲನಿ ಲಿಯೊರಾ ಡಿಸೋಜ, ತರಬೇತುದಾರರಾದ ಶಿಲ್ಪಾ ಕುಟಿನ್ಹಾ, ಸಂಗೀತ ನಿರ್ದೇಶಕ ಮೇವಿಶ್ ,ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ಆಲನಿಯ ತ೦ದೆ ಅಜಯ್ ಡಿಸೋಜ ಉಪಸ್ಥಿತರಿದ್ದರು.