ಮಂಗಳೂರು: ಸಮಾಜಮುಖಿ ಕಾರ್ಯಗಳನ್ನು ಈ ರೀತಿಯೂ ಮಾಡುವ ಮೂಲಕ ಮಾದರಿಯಾಗಬಹುದು ಎಂಬುದಕ್ಕೆ ಮಂಗಳೂರಿನ ಪತ್ರಕರ್ತರೊಬ್ಬರು ಸಾಕ್ಷಿಯಾಗಿ ನಿಲ್ಲುತ್ತಾರೆ. ಈ ಮೂಲಕ ಹೊಸ ಬದಲಾವಣೆಯೊಂದಕ್ಕೆ ನಾಂದಿ ಹಾಡಿದ್ದಾರೆ.
ಕಡು ಕಷ್ಟದಲ್ಲಿರುವ ಮಂದಿಗೆ ದಾನಿಗಳ ನೆರವಿನಿಂದ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಮುಂದಾಳತ್ವ ವಹಿಸಿರುವ ಪತ್ರಕರ್ತ ಮೋಹನ್‌ದಾಸ್ ಮರಕಡ ಅವರು ಈಗಾಗಲೇ ನಾಲ್ಕು ಕುಟುಂಬದ ಸ್ವಂತ ಸೂರಿನ ಕನಸನ್ನು ನನಸಾಗಿಸಿದ್ದಾರೆ.
‘ಶ್ರದ್ಧಾಶ್ರಯ’ ಯೋಜನೆ ಇಲ್ಲಿ ಸಾಕಾರ!
ಪ್ರತಿಯೊಬ್ಬ ದಾನಿಯಿಂದ ಒಂದು ಇಟ್ಟಿಗೆಯ ನೆರವಿನೊಂದಿಗೆ ಕೆಲಸ ಆರಂಭಿಸುವ ಮೋಹನ್ ದಾಸ್ ಅವರು ಸಮಾಜದ ದಾನಿಗಳನ್ನು ಜೊತೆಯಾಗಿಸುವ ಮೂಲಕ ಅರ್ಹ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಪತ್ನಿ ಬಬಿತ ಅವರ ಸಹಕಾರವೂ ಇದೆ. ‘ಶ್ರದ್ಧಾಶ್ರಯ’ ಎಂಬ ನೆರವು ನೀಡುವ ಇವರ ಅಭಿಯಾನಕ್ಕೆ ಸಹೃದಯಿಗಳು ಸಾಥ್ ನೀಡುತ್ತಿದ್ದಾರೆ. ಇದೀಗ ಬಂಟ್ವಾಳ ತಾಲೂಕಿನ ನಾವುರ ಗ್ರಾಮದ ಮೈಂದಾಳ ಕೆಮ್ಮಟೆಯ ಬಡ ಕುಟುಂಬವೊಂದರ ಮನೆ ಕನಸು ನನಸಾಗಿಸಿದ್ದಾರೆ. ಜೋಪಡಿಯಲ್ಲಿ ವಾಸಿಸುತ್ತಾ ಇಬ್ಬರು ಮಕ್ಕಳ ಶಿಕ್ಷಣ ಹೇಗೆ ಮುಂದುವರಿಸುವುದು ಎಂಬ ಚಿಂತೆಯಲ್ಲಿದ್ದ ಮೈಂದಾಳದ ರೇವತಿ ಪೂಜಾರಿಯವರ ಬಗ್ಗೆ ಮಾಹಿತಿ ಪಡೆದ ಮೋಹನ್ ದಾಸ್ ಅವರು, ಆ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೂ ಆಸರೆಯಾಗುವುದರೊಂದಿಗೆ ಮನೆಯ ಕನಸನ್ನೂ ನನಸಾಗಿಸಿದ್ದಾರೆ. ಸತತ ಒಂದು ವರ್ಷದ ಶ್ರಮದ ಬಳಿಕ ‘ದುರ್ಗಾ ನಿಲಯ’ ಹೆಸರಿನಲ್ಲಿ ಸುಂದರ ಮನೆಯೊಂದು ಎದ್ದುನಿಂತಿದೆ. ಈ ಮನೆ ನಿರ್ಮಾಣಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಹಾಗೂ ಊರ-ಪರವೂರ ದಾನಿಗಳ ನೆರವು ಒದಗಿ ಬಂದಿದೆ. ಇವರೆಲ್ಲರನ್ನು ಒಂದುಗೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಾಗಿದೆ.
ಇದು ಸಮಾಜದ ಎಲ್ಲಾ ದಾನಿಗಳಿಂದ ಸಾಧ್ಯವಾಗಿದೆ. ನಾನು ನಿಮಿತ್ತ ಮಾತ್ರ. ಬಡವರ ಸಂಕಷ್ಟವನ್ನು ದಾನಿಗಳ ಮುಂದಿಟ್ಟು, ಅವರಿಂದ ನೆರವು ಒದಗಿಸುವ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ನೆರವು ನೀಡಿರುವ ಸಂಘ ಸಂಸ್ಥೆಗಳು, ಉದ್ಯಮಿಗಳು, ಸ್ನೇಹಿತರು ಹೀಗೆ ಪ್ರತಿಯೊಬ್ಬರನ್ನೂ ಮರೆಯುವಂತಿಲ್ಲ’ ಎನ್ನುತ್ತಾರೆ ಮೋಹನ್ ದಾಸ್ ಅವರು.
ಯೋಜನೆ ಸಾಕಾರಕ್ಕೆ ವೇಷ!

ಮೈಂದಾಳದ ರೇವತಿಯವರ ಮಗಳು ಶ್ರದ್ಧಾಳನ್ನು ತಮ್ಮ ಶೈಕ್ಷಣಿಕ ಯೋಜನೆಯಲ್ಲಿ ದತ್ತು ತೆಗೆದುಕೊಂಡು ಶಿಕ್ಷಣ ನೀಡುತ್ತಿದ್ದ ಮೋಹನ್ ದಾಸ್ ಅವರಿಗೆ ಅವರ ಮನೆಯ ಸ್ಥಿತಿಯ ಅರಿವೂ ಆಗಿತ್ತು. ಇದನ್ನು ದಾನಿಗಳ ಮುಂದಿಟ್ಟು ಹಂತಹಂತವಾಗಿ ಮನೆ ನಿರ್ಮಾಣದ ಕೆಲಸಕ್ಕೆ ಕೈಹಾಕಿದ್ದರು. ಮೊದಲಿಗೆ ‘ಶ್ರದ್ಧಾಶ್ರಯ ಯೋಜನೆಗೆ ಒಂದು ಕಲ್ಲಿನ ನೆರವು ನೀಡಿ’ ಎಂದು ತಮ್ಮ ಆಪ್ತ ವಲಯದಲ್ಲಿ ಕೆಂಪು ಕಲ್ಲುಗಳನ್ನು ಸಂಗ್ರಹಿಸಿದರು. ಕಳೆದ ವರ್ಷ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ಮಂಗಳೂರು ಕಂಬಳದಲ್ಲಿ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಜೊತೆ ಸೇರಿ ವೇಷ ಧರಿಸಿ ಧನ ಸಂಗ್ರಹ ಮಾಡಿದ್ದರು. ಅದೇ ಸಮಯದಲ್ಲಿ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್‌ನಿಂದಟ್ರಸ್ಟ್‌ನಿಂದ ಹಣಕಾಸಿನ ನೆರವು ಲಭಿಸಿತು. ಒಂದೆಡೆ ಕಲ್ಲುಗಳ ಸಂಗ್ರಹವಾಗುತ್ತಿದ್ದಂತೆ ಮನೆ ಕೆಲಸ ಆರಂಭವಾಗಿಯೇ ಬಿಟ್ಟಿತ್ತು. ಈ ಸಂದರ್ಭ ಅಬ್ಬೆಟ್ಟು ಉದಯ ಯುವಕ ಮಂಡಲ ಹಾಗೂ ವಿಶ್ವ ಗಾಣಿಗರ ಚಾವಡಿ ಸೇವಾ ಟ್ರಸ್ಟ್ ಸದಸ್ಯರು ಶ್ರಮದಾನಕ್ಕೆ ನೆರವಾದರು. ಅಟೋಮೇಶನ್ ಕ್ಲೌಡ್ ಸೊಲ್ಯುಷನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಜಗದೀಶ್‌ರಾಮ ಅವರ ನೇತೃತ್ವದಲ್ಲಿ ಸಂಸ್ಥೆಯ ಸಿಬ್ಬಂದಿಯೂ ಶ್ರಮದಾನದಲ್ಲಿ ಭಾಗಿಯಾದರು. ಜತೆಗೆ ಸಂಸ್ಥೆಯಿಂದ ಹಾಗೂ ಸಿಬ್ಬಂದಿಗಳು ಸೇರಿ ಆರ್ಥಿಕ ನೆರವು ನೀಡಿದರು. ಅನಿವಾಸಿ ಭಾರತೀಯ ಉದ್ಯಮಿ ಗಿಲ್ಬರ್ಟ್ ಡಿಸೋಜ ಅವರೂ ಆರ್ಥಿಕ ನೆರವು ನೀಡಿದರು. ಅಲ್ಲಿಗೆ ಮನೆಯ ಪಂಚಾಂಗ ಆಗಿ ಗೋಡೆ ಎದ್ದು ನಿಂತಿತು.
ಮುಂದೆ ಮನೆಯ ಸ್ಲ್ಯಾಬ್‌ಗೆ ಫೋಕಸ್ ಕನ್‌ಸ್ಟ್ರಕ್ಷನ್ ನ ನವಾಜ್ ಅಡ್ಡೂರು ನೆರವಾದರು. ಕಡಿಮೆ ಖರ್ಚಿನಲ್ಲಿ ಮನೆಯ ಸ್ಲ್ಯಾಬ್ ನಿರ್ಮಾಣವಾಯಿತು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆರವು ಲಭಿಸಿತು. ಸ್ಲ್ಯಾಬ್ ಕೆಲಸ ಆಗುವ ಸಂದರ್ಭ ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಚಂದ್ರಶೇಖರ ಸಿದ್ದಕಟ್ಟೆ ಪರಿಚಯವಾಗಿ ಅವರ ಮೂಲಕ ದಾನಿಗಳ ನೆರವು ಹರಿದುಬಂತು. ವಿ ಕೇರ್ ಟ್ರಸ್ಟ್, ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್‌ನ ಅರ್ಜುನ್ ಭಂಡಾರ್ಕರ್ ಅವರು ಫಿನಿಶಿಂಗ್ ಹಂತದಲ್ಲಿ ಸಕಾಲದಲ್ಲಿ ನೆರವು ನೀಡಿದ್ದರು. ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡ ಮತ್ತು ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಮಂಜೇಶ್ವರ, ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಮನೆಗೆ ಭೇಟಿ ನೀಡಿ ಬೇರೆ ಬೇರೆ ದಾನಿಗಳ ಮೂಲಕ ಸುಮಾರು ೩ ಲಕ್ಷ ರೂ. ನೆರವು ನೀಡಿದ್ದಾರೆ. ಕಿರಣ್ ನಾವುರ ಸಕಾಲಿಕ ನೆರವು ನೀಡಿ ಮನೆಯ ಎಲ್ಲ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿ ಮುಗಿಸಿದ್ದಾರೆ. ಹೀಗೆ ಹಲವರ ನೆರವಿನಿಂದ ಮನೆ ನಿರ್ಮಾಣದ ಯೋಜನೆ ಕೈಗೂಡಿದೆ ಎನ್ನುತ್ತಾರೆ ಮೋಹನ್‌ದಾಸ್.
