ಮಂಗಳೂರು: ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವಎಂಟನೇ ವರ್ಷದ ಜಿಪಿಎಲ್ ಉತ್ಸವ್ 2024 ಇದರ ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿ ಲಾಂಚ್ ಕಾರ್ಯಕ್ರಮ ಶನಿವಾರ ನಡೆಯಿತು. ಗೋವಾದ ರಾಜಧಾನಿ ಪಣಜಿಯ ಕಡಲಲ್ಲಿ ಖಾಸಗಿ ನೌಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಜಿಪಿಎಲ್ ಉತ್ಸವ್ ಈಗ ಅನೇಕ ಕ್ರೀಡಾಕೂಟಗಳಿಗೆ ಮಾದರಿಯಾಗಿದೆ. ಸಾವಿರಾರು ಜನರು ಸೇರಿದರೂ ಬಹಳ ಅಚ್ಚುಕಟ್ಟಾಗಿ ಮೂರು ದಿನ ನಡೆಯುವ ಉತ್ಸವದಲ್ಲಿ ಕ್ರಿಕೆಟ್ ಪಂದ್ಯಾಟಗಳು ಕೂಡ ಬಹಳ ಶಿಸ್ತುಬದ್ಧವಾಗಿ ನಡೆಯುತ್ತದೆ. ಅದರೊಂದಿಗೆ ಆಟಗಾರರ ಹರಾಜು ಪ್ರಕ್ರಿಯೆ, ಜೆರ್ಸಿ ಲಾಂಚ್, ಟ್ರೋಫಿ ಲಾಂಚ್ ಹಾಗೂ ಅರ್ಹನಿಶಿ ಪಂದ್ಯಾಟಗಳು ಯಾವುದೇ ದೇಶಿಯ ಮಾದರಿ ಕ್ರೀಡಾಕೂಟಗಳಿಗೆ ಕಡಿಮೆ ಇಲ್ಲದಂತೆ ನಡೆಯುತ್ತದೆ. ಇನ್ನು ಈ ಸಂಘಟನೆ ಇಲ್ಲಿಯ ತನಕ ಅನೇಕ ಕ್ರೀಡಾಳುಗಳಿಗೆ ಸಹಾಯಹಸ್ತ ಚಾಚಿ ಅವರ ಭವಿಷ್ಯಕ್ಕೆ ಆಸರೆಯಾಗಿದೆ. ಈ ಬಾರಿ ಬ್ಯಾಡ್ಮಿಂಟನ್ ಪಂದ್ಯಾವಳಿ ಕೂಡ ನಡೆಯುತ್ತಿರುವುದು ನಿಜಕ್ಕೂ ಕುತೂಹಲವನ್ನು ಹೆಚ್ಚಿಸಿದೆ. ಜಿಪಿಎಲ್ ನಲ್ಲಿ ಭಾಗವಹಿಸುವ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಈ ಬಾರಿಯ ಜಿಪಿಎಲ್ ಉತ್ಸವದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ, ರಾಷ್ಟ್ರದಿಂದ ಒಟ್ಟು 16 ತಂಡಗಳು ಭಾಗವಹಿಸಲಿವೆ. ಜಿಪಿಎಲ್ ಉತ್ಸವ್ ಫೆಬ್ರವರಿ 23 ರಿಂದ ಮೂರು ದಿನಗಳ ತನಕ ಮಂಗಳೂರಿನ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜಿನ ಹಚ್ಚಹುಲ್ಲುಹಾಸಿನ ಸುಂದರ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಗೋವಾದ ವಿಶೇಷ ಬಂಡವಾಳ ಉತ್ತೇಜಕ ಮಂಡಳಿಯ ಅಧಿಕಾರಿ ತುಳಸಿದಾಸ್ ಪೈ, ಜಿಪಿಎಲ್ ಉತ್ಸವ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ ಶೆಣೈ, ಉದ್ಯಮಿ ರಾಘವೇಂದ್ರ ಕುಡ್ವ ಹಾಗೂ ತಂಡಗಳ ಮಾಲೀಕರು, ಸಹಮಾಲೀಕರು, ಗಣ್ಯರು ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು ಎಂದು ಪತ್ರಿಕಾ ಪ್ರಕಟನೆಯಲ್ಲಿ ಜಿಪಿಎಲ್ ಉತ್ಸವದ ಆಯೋಜಕರಲ್ಲಿ ಪ್ರಮುಖರಾದ ನರೇಶ್ ಪ್ರಭು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.