ಕಡಬ: ಆರೋಗ್ಯ ಇದ್ದರೆ ಮಾತ್ರ ಯಾವುದೇ ಕೆಲಸ ಮಾಡಲು ಸಾಧ್ಯ. ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾದುದು. ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ ಎಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹೇಳಿದರು.
ಅವರು ಗುರುವಾರ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ಕಡಬದ ನಾಡೋಳಿ ಡಯಾಗ್ನೊಸ್ಟಿಕ್ ಸೆಂಟರ್‌ನ ಸಹಯೋಗದಲ್ಲಿ ಕಡಬದ ನಾಡೋಳಿ ಡಯಾಗ್ನೊಸ್ಟಿಕ್ ಸೆಂಟರ್‌ನಲ್ಲಿ ೩ ದಿನಗಳ ಕಾಲ ನಡೆಯಲಿರುವ ಉಚಿತ ಇಸಿಜಿ, ಮಧುಮೇಹ, ಹಿಮೋಗ್ಲೋಬಿನ್ ಮತ್ತು ರಕ್ತದೊತ್ತಡ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ವರದಿಗಳ ಮೂಲಕ ಸೇವೆ ನೀಡುವ ಪತ್ರಕರ್ತರು ಇತರ ಸಮಾಜಮುಖಿ ಸಂಘಟನೆಗಳ ಸಹಕಾರದೊಂದಿಗೆ ಜನರ ಆರೋಗ್ಯ ತಪಾಸಣೆಯ ಶಿಬಿರವನ್ನು ಆಯೋಜಿಸಿರುವ ಶ್ಲಾಘನಾರ್ಹ ಎಂದು ಅವರು ಮೆಚ್ಚುಗೆವ್ಯಕ್ತಪಡಿಸಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಕಡಬ ಸಮುದಾಯ ಆರೋಗ್ಯಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ವಿ.ಕೆ. ಅವರು ಮಾತನಾಡಿ ರೋಗ ಬಂದ ಮೇಲೆ ಕೊರಗುವುದಕ್ಕಿಂತ ರೋಗ ಬಾರದಂತೆ ಮುಂಜಾಗರೂಕತೆ ವಹಿಸುವುದು ಅಗತ್ಯ. ಆದುದರಿಂದ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜೇಸಿಐ ಭಾರತದ ಸ್ಕಾಲರ್‌ಶಿಪ್ ವಿಭಾಗದ ರಾಷ್ಟ್ರೀಯ ಸಂಯೋಜಕ ಕಾಶೀನಾಥ್ ಗೋಗಟೆ ಹಾಗೂ ಜೇಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್ ಮಹಮ್ಮದ್ ಅವರು ಶುಭ ಹಾರೈಸಿದರು. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಪೆರ್ಲ ಉಪಸ್ಥಿತರಿದ್ದರು. ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಸ್ವಾಗತಿಸಿ, ಪ್ರಸ್ತಾವನೆಗೈದರು. ಜೇಸಿ ಕಾರ್ಯದರ್ಶಿ ಜೇಮ್ಸ್ ಕ್ರಿಶಲ್ ಡಿ’ಸೋಜ ವಂದಿಸಿದರು.