ಸುರತ್ಕಲ್: ಮಂಗಳೂರು ವಿಧಾನಸಭಾ ಕ್ಷೇತ್ರದ ಸುರತ್ಕಲ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ, ಬಿಜೆಪಿಗೆ ಸೋಲಿನ ಭಯ ಈಗಲೇ ಶುರುವಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಆರಂಭಿಸಿದ್ದಾರೆ. ಆದರೆ ತಾನು ಇದುವರೆಗೆ ಯಾವುದೇ ಕೆಟ್ಟ ಕೆಲಸಗಳನ್ನು ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಕಾರ್ಯಕರ್ತರು ಜನರ ಬಳಿಗೆ ಹೋದಾಗ ತಲೆ ಏತ್ತಿ ಮಾತಾಡುವಂತೆ ಮಾಡುತ್ತೇನೆ. ಹಾಗಾಗಿ ಈ ಲೋಕಸಭಾ ಚುನಾವಣೆಯ ಗೆಲುವು ನಿಮ್ಮ ಗೆಲುವು ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಗುರುಪುರ ಹೋಬಳಿ ತನ್ನ ಮನೆ. ತನ್ನನ್ನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡುವಲ್ಲಿ ಈ ಕ್ಷೇತ್ರದ ಪಾತ್ರ ಮಹತ್ವದ್ದು ಎಂದ ಅವರು, ಈ ಬಾರಿ ಕಾರ್ಯಕರ್ತರ ಅಪೇಕ್ಷೆಯಂತೆ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ. ಶುದ್ಧ ಚಾರಿತ್ರ್ಯದ, ಯುವ ಉತ್ಸಾಹಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿ ಕೊಡಲೇಬೇಕು ಎಂದರು.ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಆಲಿ ಮಾತನಾಡಿ, ಈ ಲೋಕಸಭಾ ಚುನಾವಣೆ ಮಾಡು ಇಲ್ಲವೇ ಮಡಿ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಂತೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೇ ಬಂದರೆ ಮಹಾಲಕ್ಷ್ಮೀ ಯೋಜನೆ ನೀಡಲಾಗುವುದು. ಇದನ್ನು ಮನೆಮನೆಗೆ ತಲುಪಿಸುವ ಕೆಲಸ ಆಗಬೇಕು ಎಂದರು.
ಐವನ್ ಡಿಸೋಜಾ ಮಾತನಾಡಿ, ಪದ್ಮರಾಜ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದಂದಿನಿಂದ ಜಿಲ್ಲೆಯಲ್ಲಿ ಸಂಚಲನ ಆರಂಭವಾಗಿದೆ. ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿಕೊಂಡಿದೆ ಎಂದರು.ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಜನಾರ್ದನ ಪೂಜಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾಗಲೇ ಜಿಲ್ಲೆಯ ಚುನಾವಣಾ ಸಮನ್ವಯಕಾರರಾಗಿ ಕೆಲಸ ನಿರ್ವಹಿಸಿಕೊಂಡು ಬಂದವರು. ವಕೀಲರಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು. ಪ್ರಮುಖರಾದ ರಾಕೇಶ್ ಮಲ್ಲಿ, ಸದಾಶಿವ ಶೆಟ್ಟಿ, ಪೃಥ್ವಿರಾಜ್, ಸುರೇಂದ್ರ ಕಾಂಬ್ಳಿ, ಜಯಶೀಲಾ ಅಡ್ಯಂತಾಯ, ಶಶಿಧರ್ ಹೆಗ್ಡೆ, ಗಿರೀಶ್ ಆಳ್ವ, ಎಂ.ಜಿ. ಹೆಗಡೆ, ಅನಿಲ್ ಕುಮಾರ್, ಹರಿನಾಥ್, ಕೃಷ್ಣಪ್ಪ ಅಮೀನ್, ಕವಿತಾ ಸನಿಲ್, ನವೀನ್ ಡಿಸೋಜಾ, ಶ್ಯಾಲೆಟ್ ಪಿಂಟೋ, ಪ್ರತಿಭಾ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.