ಮಂಗಳೂರು: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ಬಿ. ನಾರಾಯಣ ರಾವ್ ಅವರು ನಿಗಮದ ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿ ನಿಗಮದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಮಂಗಳೂರಿನ ಮೀನುಗಾರಿಕಾ ಬಂದರು, ಮಂಜುಗಡ್ಡೆ ಸ್ಥಾವರ ಡೀಸಿಲ್ ಬಂಕ್‍ಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ನಾಡದೋಣಿಗಳ ನಿಲುಗಡೆಗೆ ನಿಗಮದಿಂದ ಕೈಗೊಂಡಿರುವ ತೇಲುವ ಜಟ್ಟಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮೀನುಗಾರರಿಗೆ ಸಹಕಾರವಾಗುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಮೀನುಗಾರಿಕಾ ಬಂದರಿನ ಭೇಟಿಯ ಸಮಯದಲ್ಲಿ ಉಪಸ್ಥಿತರಿದ್ದ ಬೋಟ್ ಮಾಲೀಕರು ಮತ್ತು ಮೀನುಗಾರರಿಂದ ಮೀನುಗಾರಿಕಾ ವಿಧಾನಗಳು, ದೋಣಿಗಳು ಮತ್ತು ಮೀನುಗಾರಿಕಾ ಚಟುವಟಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು.
ನಿಗಮದ ಎಲ್ಲಾ ಶಾಖೆಗಳ ಶಾಖಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಮೀನುಗಾರಿಕಾ ಚಟುವಟಿಕೆಗಳ ಬಗ್ಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗಮದಲ್ಲಿ ಮೀನುಗಾರಿಕೆಗೆ ಮತ್ತು ಮೀನುಗಾರರಿಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ಯೋಜನೆಗಳು ಮತ್ತು 2024-25ನೇ ವರ್ಷದಲ್ಲಿ ನಿಗಮದಿಂದ ಕರಾವಳಿ ಮತ್ತು ಒಳನಾಡು ವಿಭಾಗದ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ನೂತನ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಪ್ರಸ್ತುತ ಯೋಜನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ನಿಗಮದ ವತಿಯಿಂದ ನಾಡದೋಣಿಗಳಿಗೆ ಅವಶ್ಯವಿರುವ ಸೀಮೆಎಣ್ಣೆ ವಿತರಣೆಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಮೀನು ಹಿಡುವಳಿಯ ಮಾರಾಟಕ್ಕಾಗಿ ಉತ್ತಮ ನೈರ್ಮಲ್ಯಕರ ವಾತಾವರಣವನ್ನು ಕಲ್ಪಿಸುವ ಹಿನ್ನಲೆಯಲ್ಲಿ ಹೊಸ ಮೀನು ಮಾರುಕಟ್ಟೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಾಣ ಮಾಡಲು ಮತ್ತು ಹೊನ್ನಾವರ ಬಂದರಿನಲ್ಲಿ ಮೀನುಗಾರ ಬೋಟುಗಳಿಗೆ ಕರರಹಿತ ಡೀಸಿಲನ್ನು ವಿತರಿಸಲು ಹೊಸ ಡೀಸಿಲ್ ಬಂಕ್ ಅನ್ನು ಮೀನುಗಾರಿಕಾ ಋತು ಪ್ರಾರಂಭವಾಗುವ ಮುಂಚೆಯೆ ಪ್ರಾರಂಭಿಸಲು ಅಗತ್ಯ ಕ್ರಮವಹಿಸುವಂತೆ ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.
ಉಳ್ಳಾಲ ಮಹಿಳಾ ಮೀನುಗಾರಿಕಾ ಸಹಕಾರಿ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಂವಾದವನ್ನು ನಡೆಸಿ, ಮೀನುಗಾರಿಕಾ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರ ಮತ್ತು ಸಂಘಟದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದರು. ಸಭೆಯಲ್ಲಿ ಸಂಘದ, ಅಧ್ಯಕ್ಷರಾದ. ಜಾನಕಿ ಪುತ್ರನ್, ಉಪಾಧ್ಯಕ್ಷರಾದ. ಮೀನಾಕ್ಷಿ ಹಾಗೂ ನಿರ್ದೇಶಕರುಗಳಾದ. ನಾರಾಯಣಿ, ರೋಹಿಣಿ ಮತ್ತು ಸಂಘದ ಕಾರ್ಯದರ್ಶಿ. ಉಮಾವತಿ ಮತ್ತಿತರರು ಉಪಸ್ಥಿತರಿದ್ದರು.