ಮ೦ಗಳೂರು: ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಅಪರಿಚಿತ ವ್ಯಕ್ತಿಗಳು ಮನೆಗೆ ಬ೦ದು ಸುಮಾರು 25 ರಿಂದ 30 ಲಕ್ಷ ಹಣವನ್ನು ಮತ್ತು 5 ಮೊಬೈಲ್ ಪೊನ್ ಗಳನ್ನು ಪಡೆದುಕೊಂಡು ಹೋಗಿರುವ ಘಟನೆ ಬಂಟ್ವಾಳ ತಾಲೂಕು ಸಾಲೆತ್ತೂರು ಸಮೀಪದ ಕೊಳ್ನಾಡುನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕೊಳ್ನಾಡುನ ಮಹಮ್ಮದ್ ಇಕ್ಬಾಲ್ ಎಂಬವರ ದೂರಿನಂತೆ, ಸದ್ರಿಯವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅವರ ತಂದೆ ಬೀಡಿ ಉದ್ಯಮವನ್ನು ನಡೆಸುತ್ತಿರುತ್ತಾರೆ. ಅವರ ಮನೆಗೆ ಶುಕ್ರವಾರ ರಾತ್ರಿ 8.10 ರ ಸುಮಾರಿಗೆ, ತಮಿಳುನಾಡಿನ ನೋಂದಣೆ ಹೊಂದಿರುವ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಬಂದು, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಪಿರ್ಯಾದಿರವರ ಮನೆಯನ್ನು ಪರಿಶೀಲನೆ ನಡೆಸಲು ಅದೇಶವಾಗಿರುತ್ತದೆ ಎಂಬುದಾಗಿ ತಿಳಿಸಿ ಮನೆಗೆ ಪ್ರವೇಶಿಸಿದರು. ಮನೆ ಮಂದಿಯ 5 ಮೊಬೈಲ್ ಪೊನ್ ಗಳನ್ನು ಪಡೆದುಕೊಂಡು ಬಳಿಕ ಮನೆಯನ್ನು ಹುಡುಕಾಡಿರುತ್ತಾರೆ. ಈ ವೇಳೆ ದೂರುದಾದಾರರ ತಂದೆಯವರ ಕೊಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ಪಡೆದುಕೊಂಡು, “ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಮತ್ತು ಕಸ್ಟಡಿ ತೆಗೆದುಕೊಳ್ಳುತ್ತೇನೆʼʼ ಎಂಬುದಾಗಿ ಹೇಳಿರುತ್ತಾರೆ. ರಾತ್ರಿ ಸುಮಾರು 10.30 ಗಂಟೆಗೆ ಆರೋಪಿಗಳು ದೂರುದಾರರ ಮನೆಯಿಂದ ಹೊರಬಂದು ತಾವುಗಳು ಪಡೆದುಕೊಂಡಿರುವ ಹಣಕ್ಕೆ ದಾಖಲೆಗಳನ್ನು ನೀಡಿ, ಸದ್ರಿ ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ.
ಈ ಬಗ್ಗೆ ಮಹಮ್ಮದ್ ಇಕ್ಬಾಲ್ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊ೦ಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್ ಅವರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಕ್ತ ಸಲಹೆ/ಸೂಚನೆ ನೀಡಿದರು.