ಮ೦ಗಳೂರು: ಕೊಂಕಣಿ ಲೇಖಕ್ ಸಂಘ್ 2025ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕಿ ಆಲಿಸ್ ಫೆರ್ನಾಂಡಿಸ್ (ಶಾಲಿನಿ ವಲೆನ್ಸಿಯಾ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರುಪಾಯಿ 25000 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 15ರ೦ದು ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು, ಇಲ್ಲಿ ಜರಗಲಿರುವುದು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೊಂಕಣಿ ಲೇಖಕ್ ಸಂಘ್ ಸಂಚಾಲಕ ರಿಚರ್ಡ್ ಮೊರಾಸ್ ಅವರು ಆಲಿಸ್ ಫೆರ್ನಾಂಡಿಸ್ 1965ರಲ್ಲಿ ತನ್ನ 16ನೇ ವಯಸ್ಸಿನಲ್ಲೇ ಲೇಖನಿ ಹಿಡಿದರು. 1965 ರಿಂದ 1971 ರವರೆಗೆ ಮಿತ್ರ್, ಝೆಲೊ, ರಾಕ್ಣೊ, ಕಾಣಿಕ್, ವಾವ್ರಾಡ್ಯಾಂಚೊ ತಾಳೊ ಮುಂತಾದ ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ನಿರಂತರ ಬರೆದರು. ಸಾಹಿತ್ಯ ಸೇವೆಗೆ 30 ವರ್ಷದ ವಿರಾಮ ನೀಡಿ 2002ರ ನಂತರ ಪುನಃ ಲೇಖನಿಯನ್ನು ಕೈಗೆತ್ತಿಕೊಂಡ ಇವರು ಸತತ 22 ವರ್ಷಗಳಿಂದ ಝೆಲೊ, ದಿವೊ, ಕುಟ್ಮಾಚೊ ಸೆವಕ್, ರಾಕ್ಣೊ, ದರ್ವೆಂ, ನಮಾನ್ ಬಾಳಕ್ ಜೆಜು, ಮಿಲರ್ಚೆಂ ಮಿಲನ್ ಈ ಕೊಂಕಣಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಇವರ ಸರಿಸುಮಾರು 28 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 34 ಕವಿತೆಗಳು, 30 ಕಿರು ಕಥೆಗಳು, 200 ರಷ್ಟು ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ಕೊಂಕ್ಣಿ ಲೇಖಕಾಂಚೊ ಎಕ್ವಟ್” ಎಂಬ ಕೊಂಕಣಿ ಲೇಖಕರ ಸಂಘಟನೆಯಲ್ಲಿ ಮೂರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.“ಕೊಂಕ್ಣಿ ಲೇಖಕಾಂಚೊ ಎಕ್ವಟ್”, ರಾಕ್ಣೊ ಮತ್ತು ದರ್ವೆಂ ಪತ್ರಿಕೆಗಳಿಂದ ಸನ್ಮಾನ ಹಾಗೂ ರಾಕ್ಣೊ ಸಾಹಿತ್ಯ ಸ್ಪರ್ಧೆಯಲ್ಲಿ ಕಿರುಕಥೆಗೆ ಪ್ರೋತ್ಸಾಹಕ ಬಹುಮಾನವನ್ನು ಪಡೆದಿದ್ದಾರೆ ಎ೦ದು ವಿವರಿಸಿದರು..
ಪತ್ರಿಕಾಗೋಷ್ಠಿಯಲ್ಲಿ – ಸಮಿತಿ ಸದಸ್ಯ ಡೊಲ್ಫಿ ಎಫ್. ಲೋಬೊ, ಸಲಹಾ ಸಮಿತಿ ಸದಸ್ಯರಾದ ಡಾ| ಜೆರಿ ನಿಡ್ಡೋಡಿ,ಜೆ. ಎಫ್. ಡಿಸೋಜಾ ಉಪಸ್ಥಿತರಿದ್ದರು.