ಮಂಗಳೂರು : ಶರಧಿ ಪ್ರತಿಷ್ಠಾನದ ವತಿಯಿಂದ ಜ.11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯಲಿರುವ‘ಕಲಾ ಪರ್ಬ’ದ ಲಾಂಛನ ಮತ್ತು ಕರಪತ್ರವನ್ನು ಬುಧವಾರ ನಗರದ ವಿಷ್ಣು ವೈಭವ ಹೊಟೇಲ್‌ನಲ್ಲಿ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಬಿಡುಗಡೆಗೊಳಿಸಿದರು.
ಎಳೆಯ ಕಲಾವಿದರಿಗೆ ಸ್ಪೂರ್ತಿ ನೀಡಲು ‘ಕಲಾ ಪರ್ಬ’ ಆಯೋಜಿಸಿರುವುದು ಶ್ಲಾಘನೀಯ. ಕದ್ರಿ ಪಾರ್ಕ್‌ನ ಒಟ್ಟು ಅಭಿವೃದ್ದಿ ಹಾಗೂ ಪಾರ್ಕ್‌ನ ಒಳಗೆ ವಿವಿಧ ಕಲಾ ಚಟುವಟಿಕೆಗೆ ಅವಕಾಶ ಕಲ್ಪಿಸಲು 1 ಕೋಟಿ ರೂ. ಮೀಸಲಿಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಕಲಾಪರ್ಬ ಸಹಿತ ವಿವಿಧ ಕಲಾ ಚಟುವಡಿಕೆಗಳಿಗೆ ಪೂರಕವಾಗುವ ಕಾರ್ಯ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಈ ಸಂದರ್ಭ ತಿಳಿಸಿದರು.
ಸಂಘಟಕ ಪುನೀಕ್ ಶೆಟ್ಟಿ ಮಾತನಾಡಿ, ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಹಾಗೂ ತನ್ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶದಿಂದ ಕಲಾ ಪರ್ಬ ಆಯೋಜಿಸಲಾಗುತ್ತಿದೆ .ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ, 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಶರಧಿ ಪ್ರತಿಷ್ಟಾನದ ಮಾರ್ಗದರ್ಶಕ ರಮೇಶ್ ನಾಯಕ್, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಿತ್ರ ಕಲಾವಿದರಾದ ಕೋಟಿಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ರಾಜೇಂದ್ರ ಕೇದಿಗೆ, ಶ್ರೀಧರ ಹೊಳ್ಳ, ರಾಧಾಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಚಿತ್ರ ಕಲಾವಿದ ದಿನೇಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.