ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇವರ ಸಹಯೋಗದೊಂದಿಗೆ ತಂಬಾಕು ಮುಕ್ತ ಯುವ ಅಭಿಯಾನಕ್ಕೆ ಜಾಥಾ ಮೂಲಕ ಚಾಲನೆ ನೀಡಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣಕೋಶ, ಜಿಲ್ಲಾ ಕಾರ್ಯಕ್ರಮಾಧಿಕಾರಿ, ಡಾ. ನವೀನ್ ಚಂದ್ರ ಕುಲಾಲ್ ಮಾತನಾಡಿ, ಕ್ಯಾನ್ಸರ್ ರೋಗಕ್ಕೆ ಪ್ರಮುಖ ಕಾರಣಗಳಲ್ಲಿ ತಂಬಾಕು ಸೇವನೆ ಮುಖ್ಯ ಕಾರಣ. ಯುವ ಜನರು ಈ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸುವುದು ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ ಮಾತನಾಡಿ, ಯುವ ಜನರು ತಂಬಾಕಿನ ಪಿಡುಗಿಗೆ ಬಲಿಯಾಗದೆ ಉತ್ತಮ ಆಹಾರ ಸೇವಿಸುತ್ತಾ ಉತ್ತಮ ಜೀವನ ನಡೆಸಲು ಕರೆ ನೀಡಿದರು.
ಜಿಲ್ಲಾ ಸಲಹೆಗಾರ ಪುಂಡಲೀಕ ಲಕಾಟಿ ಮಾತನಾಡಿ ತಂಬಾಕು ಮುಕ್ತ ಯುವ ಅಭಿಯಾನ ಮತ್ತು ಕೋಟ್ಪಾ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು. ಸಮಾಜ ಕಾರ್ಯಕರ್ತರಾದ ಶ್ರುತಿ ಜೆ ಸಾಲ್ಯಾನ್ ಪ್ರತಿಜ್ಞಾ ವಿಧಿ ಭೋದಿಸಿದರು.
ಈ ಸಂದರ್ಭದಲ್ಲಿ ತಂಬಾಕು ಮುಕ್ತ ಯುವ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರುದ್ರೇಶ್, ಶೋಭಾಮಣಿ, ಹೈದರಾಲಿ, ಪವನ್ ಮತ್ತಿತರರು ಉಪಸ್ಥಿತರಿದ್ದರು.