ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ 2024ರ ನೋಂದಣಿ ಪ್ರಕ್ರಿಯೆ ಪ್ರಾರಂಭದ ಪೋಸ್ಟರ್ ಹಾಗೂ ಬ್ಯಾನರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಆರ್. ಗುಂಡೂರಾವ್ ಅವರು ಸೋಮವಾರ ಉರ್ವಸ್ಟೋರ್ ಜಿಲ್ಲಾ ಪಂಚಾಯತ್ ನಲ್ಲಿರುವ ನೇತ್ರಾವತಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಶಾಸಕ ಐವನ್ ಡಿ’ಸೋಜಾ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜಾ, ಹಾಗೂ ಜಿಲ್ಲಾ ಉದ್ಯೋಗಾಧಿಕಾರಿ ವೈ.ಎಂ.ಬಡಿಗೇರ, ಉಪಸ್ಥಿತರಿದ್ದರು.
ಯುವನಿಧಿ ಯೋಜನೆಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಆರ್ಥಿಕ ನೆರವು ನೀಡಲು ಯುವ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ 2023ನೇ ಹಾಗೂ 2024ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ 06 ತಿಂಗಳವರೆಗೆ (180 ದಿನ) ಉದ್ಯೋಗ ಸಿಗದವರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮಾನದಂಡಗಳು:
- ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಯಾಗಿರಬೇಕು.
- ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೋಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿದವರು.
- 2023 ಹಾಗೂ 2024ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಲಭಿಸದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ 02 ವರ್ಷ ಗರಿಷ್ಠ ಅವಧಿಯವರೆಗೆ ಮಾತ್ರ ಈ ಭತ್ಯೆ ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಸೇವಾಸಿಂಧು ಜಾಲತಾಣ https://sevasindhugs.karnataka.gov.in ನಲ್ಲಿ ಲಾಗಿನ್ ಆಗಿ ಸ್ವತಃ ಅರ್ಜಿ ಸಲ್ಲಿಸಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಮೂಲಕವೂ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆಧಾರ್ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.
ಸ್ವಯಂ-ದೃಢೀಕರಣ:
ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಖಿನೊಳಗೆ https://sevasindhugs.karnataka.gov.in ವೆಬ್‍ಸೈಟ್ ಮೂಲಕ ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ. ಎಂದು ಜಿಲ್ಲಾ ಉದ್ಯೋಗಾಧಿಕಾರಿ ರವರಾದ ವೈ.ಎಂ.ಬಡಿಗೇರ್ ಇವರು ತಿಳಿಸಿದ್ದಾರೆ.
ಯಾರು ಅರ್ಹರು:
2023 ಅಥವಾ 2024ರಲ್ಲಿ ಪದವಿ/ಸ್ನಾತಕೋತ್ತರ ಪದವಿ/ಡಿಪ್ಲೋಮಾ ಉತ್ತೀರ್ಣರಾಗಿ 06 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಅಭ್ಯರ್ಥಿಗಳು. ಸ್ವಯಂ ಉದ್ಯೋಗ ಹೊಂದಿಲ್ಲದವರು. ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವವರು. ಕರ್ನಾಟಕದಲ್ಲಿ ವಾಸವಿರುವವರು.
ಯಾರು ಅನರ್ಹರು:
ಉನ್ನತ ವ್ಯಾಸಂಗಕ್ಕೆ ದಾಖಲಾತಿ ವಿಧ್ಯಾಭ್ಯಾಸ ಮುಂದುವರಿಸುವವರು. ಶಿಶಿಕ್ಷು (ಅಪ್ರೆಂಟಿಸ್‍ಶಿಪ್) ವೇತನ ಪಡೆಯುತ್ತಿರುವವರು. ಸರಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.