16.7 C
Karnataka
Saturday, November 23, 2024

ದ.ಕನ್ನಡ : ಶಾಂತಿಯುತ ಚುನಾವಣೆ ; ಶೇ 77.44 ಮತದಾನ;

ಮಂಗಳೂರು:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಬಿರುಸಿನ ಶಾಂತಿಯುತ ಮತದಾನವಾಗಿದ್ದು ಒಟ್ಟು ಶೇ.77.44ಮತದಾನವಾಗಿದೆ. 2019 ಕ್ಕೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ತುಸು ಹೆಚ್ಚಳವಾಗಿದೆ. ಕಳೆದ ಬಾರಿ ಶೇ.77.19 ಮತದಾನವಾಗಿತ್ತು.
ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದ ವೇಳೆಯಿಂದಲೂ ಮತದಾರರು ಬಹಳ ಉತ್ಸುಕತೆಯಿಂದ ಸರದಿಸಾಲಿನಲ್ಲಿ ನಿಂತಿದ್ದ ದೃಶ್ಯ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಕಂಡುಬಂದಿತ್ತು.
ಶಾಂತಿಯುತ ಮತದಾನ
ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯ ಗಡುವು ನೀಡಲಾಗಿತ್ತು. ಸಂಜೆ 6 ಗಂಟೆಯ ಬಳಿಕ ಸರದಿ ಸಾಲಿನಲ್ಲಿದ್ದ ಮತದಾರರಿಗೆ ಚೀಟಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಕೆಲವು ಕಡೆ 7ಗಂಟೆಯವರೆಗೆ ಮುಂದುವರಿಯಿತು.ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಮತದಾನ ಜರಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿತ್ತು. ಪೊಲೀಸ್ ಇಲಾಖೆಯಿಂದಲೂ ಭದ್ರತಾ ವ್ಯವಸ್ಥೆಗಳನ್ನು ಆಯೋಜಿಸಲಾಗಿತು.
ಮತ ಯಂತ್ರಗಳಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಹೊರತುಪಡಿಸಿದರೆ ಬೆಳಗಿನಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಗೊಂದಲವಿಲ್ಲದೆ ಮತದಾನ ಸುಸೂತ್ರವಾಗಿ ನಡೆದಿದೆ. ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ದೃಷ್ಟಿ ಯಿಂದ ಕ್ಷೇತ್ರದ 1876 ಮತಗಟ್ಟೆಗಳಲ್ಲಿ ಬಿಗುಬಂದೋಬಸ್ತ್‌ ಮಾಡಲಾಗಿತ್ತು. ಕ್ಷೇತ್ರದಲ್ಲಿ ಕೆಲವು ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್‌ಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ಬದಲಾಯಿಸಲಾಯಿತು .
ಎ.26 ರಂದು ಜಿಲ್ಲೆಯಲ್ಲಿ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಸೇರಿದ೦ತೆ ಶುಭ ಸಮಾರಂಭನಿಗದಿಯಾಗಿತ್ತು. ಆದರೆ ಮದುವೆಯ ನಡುವೆಯೂ ವಧುವರರು ಮಂಟಪಕ್ಕೆ ತೆರಳುವ ಮುನ್ನ ಮತದಾನ ಕೇಂದ್ರಕ್ಕೆ ಬಂದು ಮತಚಲಾಯಿಸಿ ಬದ್ದತೆ ಮೆರೆದ ಘಟನೆಗಳು ನಡೆದಿದೆ.

ಬ೦ಜಾರುಮಲೆಯಲ್ಲಿ ಶೇ. 100 ಮತದಾನ
ಬೆಳ್ತ೦ಗಡಿ ತಾಲೂಕಿನ ದುಗ೯ಮ ಪ್ರದೇಶದಲ್ಲಿರುವ ಬ೦ಜಾರುಮಲೆ ಮತಗಟ್ಟೆಯಲ್ಲಿ ಶೇ. 100 ಮತದಾನವಾಗುವ ಮೂಲಕ ಹೊಸ ಇತಿಹಾಸ ದಾಖಲಾಗಿದೆ. ಒಟ್ಟು 111 ಮತದಾರರಲ್ಲಿ ಎಲ್ಲಾ ಮತದಾರರು ಮತ ಚಲಾಯಿಸಿದ್ದಾರೆ.

ಮತದಾನದ ಫೋಟೋ :ಪ್ರಕರಣ ದಾಖಲು
ಪುತ್ತೂರು ವಿಧಾನಸಭಾ ಕ್ಷೇತ್ರ -206 ರ ಮತಗಟ್ಟೆ ಸಂಖ್ಯೆ 147 ರಲ್ಲಿ ಮತದಾನ ಮಾಡಿರುವ, ಆರ್ಯಾಪು, ಪುತ್ತೂರು ತಾಲೂಕು ನಿವಾಸಿ ರಂಜಿತ್ ಬಂಗೇರಾ ಎಂಬವರು ಮತದಾನ ಮಾಡುವ ಸಮಯದಲ್ಲಿ ತನ್ನ ಮತದಾನದ ಗೌಪ್ಯ ಮಾಹಿತಿಯನ್ನು ಮೊಬೈಲ್ ನಿಂದ ಫೋಟೋ ತೆಗೆದು, ಸದ್ರಿ ಪೋಟೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಪ್ಲಾಯಿಂಗ್ ಸ್ಕ್ವಾಡ್ -2 ರ ಉಸ್ತುವಾರಿ ಅಧಿಕಾರಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಮತದಾನ ಪ್ರಕ್ರಿಯೆಗಳು ಪೂಣ೯ಗೊ೦ಡ ಬಳಿಕ ಮತಪೆಟ್ಟಿಗೆಗಳನ್ನು ಡಿಮಾಸ್ಟರಿ೦ಗ್‌ ಕೇ೦ದ್ರಗಳಿಗೆ ತ೦ದು ಬಳಿಕ ಅಲ್ಲಿ೦ದ ಸುರತ್ಕಲ್ ನ ಎನ್‌ ಐಟಿಕೆಯ ಸ್ಟ್ರಾ೦ಗ್‌ ರೂ೦ಗೆ ತರಲಾಯಿತು.
ಮತ ಎಣಿಕೆ ಜೂ.4 ರ೦ದು ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles