ಮಂಗಳೂರು: ಸಕಲ ಜೀವ ರಾಶಿಗಳಿಗೂ ಬದುಕುವ ಹಕ್ಕಿದ್ದು, ಅದನ್ನು ಸಮಾನವಾಗಿ ನೋಡುವ ಚಿಂತನೆ ಜೈನ ಧರ್ಮದಲ್ಲಿ ಒಡಮೂಡಿದೆ. ರಾಜನಾಗಿ ಹುಟ್ಟಿ ಸಕಲವನ್ನೂ ಪರಿತ್ಯಜಿಸಿ ಆತ್ಮ ಸದ್ವಿಚಾರಕ್ಕಾಗಿ ಸತ್ ಚಿಂತನೆಗಳನ್ನು ರೂಢಿಸಿಕೊಂಡ ಭಗವಾನ್ ಮಹಾವೀರರ ತತ್ವಗಳು ಅನುಕರಣನೀಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಭಿಪ್ರಾಯಪಟ್ಟರು.
ಅವರು ಏ.22 ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾವೀರ ಜಯಂತಿಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ನಂತರ ವೇಣೂರಿನ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಲಭಿಸಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ಅವರು ಮಾತನಾಡಿ, ಶಾಂತಿ ಸ್ಥಾಪನೆಯಲ್ಲಿ ಜೈನ ಧರ್ಮದ ಪಾತ್ರ ಅತ್ಯಂತ ಪ್ರಮುಖವಾದದ್ದು ಎ೦ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್ ಕೆ., ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಜೈನ ಸಮಾಜದ ಮುಖಂಡರು, ಪದಾಧಿಕಾರಿಗಳು, ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೆ ನೆರವೇರಿಸಿ, ಗೌರವ ಸಮರ್ಪಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಕೌಶಲ್ಯಾಭಿವೃದ್ಧಿ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಅಧಿಕಾರಿ ಪ್ರದೀಪ್ ಡಿಸೋಜಾ, ಜೈನ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್. ಜಿ ಸ್ವಾಗತಿಸಿದರು. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಭಗವಾನ್ ಮಹಾವೀರರ ಜಯಂತಿಯನ್ನು ಆಚರಿಸಲಾಯಿತು.