ಮಂಗಳೂರು:ತುಂಬೆಯಿ೦ದ ಸರಬರಾಜು ಆಗುವ ಕುಡಿಯುವ ನೀರು ಮುಖ್ಯ ಕೊಳವೆಗೆ ವಿವಿಧ ಪಂಚಾಯತ್ ವ್ಯಾಪ್ತಿಗಳಲ್ಲಿ ಮಾಡಿರುವ ಅನಧಿಕೃತ ಜೋಡಣೆಗಳ ತೆರವು ಕಾಯಾ೯ಚರಣೆ ಶನಿವಾರ ಜರಗಿತು.
ಮಂಗಳೂರು ಮಹಾನಗರಪಾಲಿಕೆಗೆ ತುಂಬೆ ಅಣೆಕಟ್ಟಿನಿಂದ ಪಂಪ್ ಮಾಡಲಾಗುವ ಕುಡಿಯುವ ನೀರನ್ನು ಪಂಚಾಯತ್ ವ್ಯಾಪ್ತಿ ಮೂಲಕ ಹಾದು ಹೋಗಿರುವ ಮುಖ್ಯ ಕೊಳವೆಯಿಂದ ವಿವಿಧ ಪಂಚಾಯತ್ ವ್ಯಾಪ್ತಿಗಳಲ್ಲಿ ಕಟ್ಟಡ ರಚನೆಗೆ, ವಾಣಿಜ್ಯ ಉದ್ದೇಶಕ್ಕೆ ಹಾಗೂ ಕೃಷಿ
ಚಟುವಟಿಕೆಗಳಿಗೆ ಅನಧಿಕೃತ ಜೋಡಣೆ ಮೂಲಕ ನೀರು ಬಳಕೆ ಮಾಡುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಗೆ ನೀರಿನ ಪೂರೈಕೆಯ ಪ್ರಮಾಣ ಕಡಿಮೆಯಾಗುತ್ತಿದ್ದ ಪ್ರಯುಕ್ತ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದಿರುವುದು ಮಂಗಳೂರು ಮಹಾನಗರಪಾಲಿಕೆ ಗಮನಕ್ಕೆ ಬ೦ದಿತ್ತು. ಈ ಹಿನ್ನಲೆಯಲ್ಲಿ ಶನಿವಾರ ಪಾಲಿಕೆ ಅಧಿಕಾರಿಗಳ 3 ತಂಡಗಳನ್ನು ರಚಿಸಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡು, ತುಂಬೆ, ಪುದು ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪರಿಶೀಲಿಸಿದಾಗ ಅನಧಿಕೃತವಾಗಿ ಮುಖ್ಯ ಕೊಳವೆ ಮಾರ್ಗದಿಂದ ಕಟ್ಟಡ ರಚನೆಗೆ, ಕೃಷಿ ಚಟುವಟಿಕೆಗೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ನೀರಿನ ಅನಧಿಕೃತ ಜೋಡಣೆಗಳು ಕ೦ಡುಬ೦ದಿತ್ತು. ಅನಧಿಕೃತ ಜೋಡಣೆಗಳನ್ನು ಪೋಲೀಸ್ ಇಲಾಖೆ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆಯ ಮೂಲಕ ಕಡಿತಗೊಳಿಸಲಾಯಿತು.