ಮಂಗಳೂರು: “ಶೆಫ್ ಟಾಕ್ ಸೀಸನ್ -2 ಕಬಡ್ಡಿ ಪ್ರೀಮಿಯರ್ ಲೀಗ್ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದ್ದು ಆಗಸ್ಟ್ 30ರಂದು ಆಹಾರೋತ್ಸವದ ಉದ್ಘಾಟನೆ ನಡೆಯಲಿದೆ. ಇದನ್ನು ಮಂಗಳೂರು
ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಆಗಸ್ಟ್ 31ರಂದು ಕಬಡ್ಡಿ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು ಇದನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ“ ಎಂದು ಕಾರ್ಯಕ್ರಮ ಆಯೋಜಕ ಸುದೇಶ್ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೌರವ ಸಲಹೆಗಾರ ವಿಶ್ವಾಸ್ ದಾಸ್ ಅವರುಮಾತಾಡಿ, ”ಕಳೆದ ವರ್ಷ ನಡೆದ ಸೀಸನ್ 1 ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಈ ವರ್ಷ ಗೌರವಾಧ್ಯಕ್ಷ ಪ್ರಕಾಶ್ ಕುಂಪಲ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಕಬಡ್ಡಿ ಟೂರ್ನಮೆಂಟ್ ಜೊತೆಗೆ ಈ ಬಾರಿ ಆಹಾರೋತ್ಸವ ಮತ್ತು ವಿನೋದ ಮೇಳವನ್ನು ಕೂಡಾ ಆಯೋಜಿಸಿದ್ದೇವೆ. ಜೊತೆಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಡಾ. ಸದಾನಂದ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಸದಾಶಿವ ಉಳ್ಳಾಲ ಪಾಲ್ಗೊಳ್ಳಲಿದ್ದಾರೆ. ಬಹುಮಾನ ವಿತರಣೆಯನ್ನು “ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್”ನ ಮ್ಯಾನೇಜಿಂಗ್ ಡೈರೆಕ್ಟರ್ ಗೋವಿಂದ ಬಿ. ಪೂಜಾರಿ ಅವರು ನೆರವೇರಿಸಲಿದ್ದಾರೆ“ ಎಂದರು.
ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಮಾತಾಡಿ, ”ಈ ವರ್ಷ ಕಬಡ್ಡಿ ಟೂರ್ನಮೆಂಟ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಅಸ್ರಾ ಬ್ರಿಗೇಡ್ಸ್, ಲೈಫ್ ಲೈನ್ಸ್ ಫಾಲ್ಕನ್ಸ್, ಟೀಮ್ ಬಾವ, ಯು ಕುಂಜತ್ತೂರು, ಮಂಗಳೂರು ಯುನೈಟೆಡ್ ಕಬಡ್ಡಿ ಕ್ಲಬ್, ಪ್ರಕಾಶ್ ಕುಂಪಲ ವಾರಿಯರ್ಸ್, ಕರ್ನಾಟಕ ತುಳುವಾಸ್ ನೈಜೀರಿಯಾ, ಮತ್ತು ನ್ಯೂ ಸ್ಟಾರ್ ಮಂಗಳೂರು ಈ ತಂಡಗಳ ಆಟಗಾರರನ್ನು ಆಗಸ್ಟ್ 20ರಂದು ಸೀವೂ ಹೋಟೆಲ್‌ನಲ್ಲಿ ನಡೆದ ಹರಾಜು ಮೂಲಕ ಆಯ್ಕೆ ಮಾಡಲಾಗಿತ್ತು, ಒಟ್ಟು 99 ಆಟಗಾರರು ಆಯ್ಕೆಯಾಗಿದ್ದಾರೆ.
ಈ ವರ್ಷ ನಾವು 100+ ಆಹಾರ ಮಳಿಗೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಅವು ವಿವಿಧ ರೀತಿಯ ರುಚಿಕರ ಆಹಾರಗಳನ್ನು ಒದಗಿಸುತ್ತವೆ. ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2 ರಲ್ಲಿ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಕರನ್ನು ನಿರೀಕ್ಷಿಸಲಾಗಿದ್ದು ಇದು ದಕ್ಷಿಣ ಭಾರತದ ಅತ್ಯಂತ ದೊಡ್ಡ ಈವೆಂಟ್ ಆಗಿರುವುದರ ನಿರೀಕ್ಷೆ ಇದೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹರೀಶ್ ನಾಯಕ್, ಅಝ್ಪರ್ ರಜಾಕ್, ಕರುಣಾಕರ್, ಹಮೀದ್ ಅಮ್ಮಿ, ದೀಪಕ್ ಪಿಲಾರ್, ವಿನೋದ್ ಶೆಟ್ಟಿ, ಸುಕೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.