ಮಂಗಳೂರು: ಮಂಗಳೂರಿನಿಂದ ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಆರಂಭವಾಗಿರುವ ಸರಕಾರಿ ಕೆಎಸ್ಸಾರ್ಟಿಸಿ ಬಸ್‌ಗೆ ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದ ಬಳಿ ಶನಿವಾರ ತೆಂಗಿನ ಕಾಯಿ ಒಡೆದು, ಆರತಿ ಎತ್ತಿ ಚಾಲನೆ ನೀಡಲಾಯಿತು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿಯಿಯ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಬಸ್ಸನ್ನು ನಿಲ್ಲಿಸಿ, ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಶುಭ ಕೋರಲಾಯಿತು.
ಬಳಿಕ ಮಾತನಾಡಿದ ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಕೊಟ್ಟ ಮಾತನ್ನು ಉಳಿಸಿಕೊಂಡು ಪಂಚ ಗ್ಯಾರಂಟಿ ಯಶಸ್ವಿಯಾಗಿ ಕೊಂಡು ಹೋಗುತ್ತಿದ್ದಾರೆ. ಮೂಡುಬಿದಿರೆ- ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್ ಇಲ್ಲದೆ ಶಕ್ತಿ ಯೋಜನೆ ಜಾರಿಗೆ ತೊಡಕಾಗಿತ್ತು. ಇದೀಗ ಸಾರಿಗೆ ಸಚಿವರು ಮತ್ತು ಕಾಂಗ್ರೆಸ್‌ನ ಎಲ್ಲ ನಾಯಕರ ಪ್ರಯತ್ನದಿಂದ ಈ ಭಾಗಕ್ಕೂ ಸರಕಾರಿ ಬಸ್ ನೀಡಿದ್ದಾರೆ. ಈಗಿರುವ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಮಂಗಳೂರಿನ ಧಾರ್ಮಿಕ, ಪ್ರವಾಸಿ ಕೇಂದ್ರಗಳಿಗೂ ಸರಕಾರಿ ಬಸ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್.ಆರ್, ಕಾರ್ಪೊರೇಟರ್ ನವೀನ್ ಡಿಸೋಜ,. ಮಾಜಿ ಕಾರ್ಪೊರೇಟರ್ ಅಶೋಕ್ ಡಿ.ಕೆ., ನೀರಜ್ ಚಂದ್ರಪಾಲ್, ನಝೀರ್ ಬಜಾಲ್,ಟಿ.ಕೆ.ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಎಂ.ಪಿ. ಮನೋರಾಜ್, ಭಾಸ್ಕರ್ ರಾವ್, ಅಲಿಸ್ಟರ್ ಡಿಕುನ್ಹ, ಶಾಂತಲಾ ಗಟ್ಟಿ, ಸಾರಿಕ ಪೂಜಾರಿ, ಪ್ರೇಮ್ ಬಲ್ಲಾಳ್‌ಬಾಗ್, ಸತೀಶ್ ಪೆಂಗಲ್, ಇಮ್ರಾನ್ ಎ ಆರ್ ಯೋಗೀಶ್ ನಾಯಕ್ ಮತ್ತಿತರರಿದ್ದರು.