ಮಂಗಳೂರು:ಯಾವುದು ಘೋರವನ್ನು ಸೃಷ್ಟಿಸುತ್ತದೋ, ಅದೇ ಶಾಂತಿಯನ್ನು ಸೃಷ್ಟಿಸುತ್ತದೆ ಎನ್ನುವುದು ವೇದಗಳ ಮಾತು. ಈ ಮಾತು ಈವತ್ತಿಗೂ ಪ್ರಸ್ತುತ. ನಮ್ಮನ್ನು ಆಳುತ್ತಿರುವುದು ಬೇರೆ ಯಾವುದೂ ಅಲ್ಲ. ಭಾಷೆ, ಮನಸ್ಸು ಮತ್ತು ಆಲೋಚನೆಯೇ ನಮ್ಮನ್ನು ಆಳುತ್ತದೆ. ಇವುಗಳಿಂದಲೇ ಘೋರ ಮತ್ತು ಶಾಂತಿಯನ್ನು ಸೃಷ್ಟಿಸುತ್ತದೆ ಎಂದು ಹಿರಿಯ ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಆರನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಯೋಚನಾ ಸಾಮರ್ಥ್ಯಕ್ಕೆ ಧರ್ಮ ಹೇಗೆ ಸವಾಲೋ ಹಾಗೆಯೇ ಸಾಹಿತ್ಯವೂ ಸವಾಲು. ಸಾಹಿತ್ಯ ರಚನೆ ಅಂದರೆ ಸ್ವಾಧ್ಯಾಯ. ಯಾವುದೋ ಕಾಲದಲ್ಲಿ ಬರೆದ ಗ್ರಂಥದ ಅಧ್ಯಯನ ನಿಜವಾದ ಶೋಧನೆ ಆಗುವುದಿಲ್ಲ. ಬೇರೆ ದೇಶದಲ್ಲಿ ಇಲ್ಲದ ಸಾಹಿತ್ಯದ ತಪಸ್ಸು ನಮ್ಮಲ್ಲಿದೆ. ಸೃಜನಶೀಲ ಸಾಹಿತ್ಯ ಸೃಷ್ಟಿಗೆ ಆದರ್ಶ ಮತ್ತು ದುರಂತ ಪ್ರಜ್ಞೆ ಎರಡೂ ಇರಬೇಕು. ಕಟ್ಟುವ ಉತ್ಸಾಹ, ನೋವಿಗೆ ಕಿವಿಗೊಡುವ ಸಂವೇದನಾ ಸೂಕ್ಷ್ಮತೆ ಇದ್ದಲ್ಲಿ ಸೃಜನಶೀಲ ಸಾಹಿತ್ಯ ಸಾಧ್ಯ.
ರಾಮಾಯಣ ರಚಿಸಿದ ವಾಲ್ಮೀಕಿಯನ್ನು ಆದಿಕವಿ ಎನ್ನುತ್ತೇವೆ. ಅದರ ಪೂರ್ವದಲ್ಲಿ ಪಾತ್ರ ಚಿತ್ರಣದ ಕೃತಿ ಬಂದಿರಲಿಲ್ಲ. ರಾಮನ ಪಾತ್ರವೇ ಆದರ್ಶ. ಮನುಷ್ಯನದ್ದು ನೋಡಿದ್ದು ಕೇಳಿದ್ದನ್ನು ಅನುಕರಣೆ ಮಾಡುವ ಗುಣ. ಅದಕ್ಕಾಗಿ ನಾರದನಿಗೆ ಒಂದು ಮಾದರಿಯನ್ನು ತೋರಿಸಬೇಕಿತ್ತು. ನಾರದನಿಂದ ಕೇಳಿದ ಕಥೆಯನ್ನು ವಾಲ್ಮೀಕಿ ಹಾಗೆಯೇ ಬರೆಯುವುದಿಲ್ಲ. ಎರಡು ಕ್ರೌಂಚಗಳು ಜೊತೆಗಿದ್ದಾಗ ಬೇಡನ ಬಾಣಕ್ಕೆ ಒಂದು ಸಾಯುತ್ತದೆ. ಹೆಣ್ಣು ಕ್ರೌಂಚದ ಅಳು ಕೇಳಿ, ಕರುಣ ರಸದ ಅನುಭವ ವಾಲ್ಮೀಕಿಗೆ ಆಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕರುಣ ಮತ್ತು ವೀರ ರಸಗಳೇ ಮುಖ್ಯವಾಗಿ ಕಾಣಿಸುತ್ತದೆ. ಸೃಷ್ಟಿ ಶಕ್ತಿಯ ಉದ್ದೀಪನ ಆಗಲು ಮನಸ್ಸು ತುಡಿಯಬೇಕು. ಕಟ್ಟುವ ಉತ್ಸಾಹ ಮತ್ತು ನೋವಿಗೆ ಮಿಡಿಯುವ ಮನಸ್ಸಿನ ಸೂಕ್ಷ್ಮತೆ ಸೇರಿದರೆ ಗೊತ್ತಿಲ್ಲದೇ ಸೃಷ್ಟಿಶೀಲತೆ ಪ್ರಕಟವಾಗುತ್ತದೆ ಎಂದು ತಮ್ಮ ಸಾಹಿತ್ಯ ರಚನೆಯ ಅನುಭವವನ್ನು ತೋಳ್ಪಾಡಿ ಕಟ್ಟಿಕೊಟ್ಟರು.
ಲಿಟ್ ಫೆಸ್ಟ್ ಐದು ಆವೃತ್ತಿಗಳ ಕುರಿತಾಗಿ ಮೇರು ಸಾಹಿತಿಗಳು ಬರೆದ ಲೇಖನಗಳನ್ನು ಒಳಗೊಂಡ ಪುಸ್ತಕ ‘ದಿ ಐಡಿಯಾ ಭಾರತ್ ‘ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಗೆ ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಪರವಾಗಿ ಟ್ರಸ್ಟಿ ಮಧುರಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಮಿಥಿಕ್ ಸೊಸೈಟಿಯ ಎಸ್. ರವಿ ಉಪಸ್ಥಿತರಿದ್ದರು. ಆರ್ ಜೆ ಅಭಿಷೇಕ್ ಮತ್ತು ನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಭಾರತ್ ಫೌಂಡೇಶನ್ ಟ್ರಸ್ಟಿಗಳಾದ ಕ್ಯಾಪ್ಟನ್ ಬೃಜೇಶ್ ಚೌಟ, ಶ್ರೀ ರಾಜ್ ಗುಡಿ, ಅಶ್ವಿನಿ ದೇಸಾಯಿ ಉಪಸ್ಥಿತರಿದ್ದರು.