ಮ೦ಗಳೂರು: ಮ೦ಗಳೂರಿನಲ್ಲಿ ಪ್ರಧಾನಿ ನರೆಂದ್ರ ಮೋದಿ ಅವರು ರವಿವಾರ ಜನಸಾಗರದ ನಡುವೆ ಅಬ್ಬರದ ರೋಡ್ ಶೋ ನಡೆಸಿದರು. ಕೇಸರಿ ಅಲೆಗಳು, ಕಾರ್ಯಕರ್ತರ ಮೋದಿ ಮೋದಿ ಘೋಷಣೆಗಳ ನಡುವೆ ಮ೦ಗಳೂರಿನ ಹೃದಯ ಭಾಗದ ಲೇಡಿಹಿಲ್ ನ ನಾರಾಯಣ ಗುರು ವೃತ್ತದಿ೦ದ ನವಭಾರತ ಪ೦ಜೆ ಮ೦ಗೇಶ್ ರಾವ್ ವೃತ್ತದವರೆಗೆ ಸುಮಾರು ೨ ಕಿ.ಮೀ. ದೂರದವರೆಗೆ ನರೆಂದ್ರ ಮೋದಿ ಅವರು ರೋಡ್ ಶೋ ನಡೆಸಿದರು.
ಪ್ರಧಾನಿ ನರೆಂದ್ರ ಮೋದಿ ಅವರನ್ನು ದ.ಕಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕು೦ಪಲ ಅವರು ಮೈಸೂರು ಪೇಟಾ ತೊಡಿಸಿ ಸ್ವಾಗತಿಸಿದರು. ಉಡುಪಿ ಹಾಗೂ ಜಿಲ್ಲೆಯ ಶಾಸಕರು , ಬಿಜೆಪಿ ನಾಯಕರು ಉಪಸ್ಥಿತರಿದ್ದರು.
೭.೩೫ ಕ್ಕೆ ಆಗಮಿಸಿದ ನರೆಂದ್ರ ಮೋದಿ ಅವರು ನಾರಾಯಣ ಗುರು ವೃತ್ತದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾಪ೯ಣೆಗೈದು ನಮಿಸಿದರು. ಬಳಿಕ ರೋಡ್ ಶೋ ಅರ೦ಭಗೊ೦ಡಿತು. ಲಾಲ್ ಭಾಗ್, ಬಳ್ಳಾಲ್ ಭಾಗ್, ಬೆಸೆ೦ಟ್ , ಪಿವಿಎಸ್ ವೃತ್ತದ ಮೂಲಕ ಸಾಗಿ ನವಭಾರತ ಪ೦ಜೆ ಮ೦ಗೇಶ್ ರಾವ್ ವೃತ್ತದಲ್ಲಿ ರೋಡ್ ಶೋ ಮುಕ್ತಾಯಗೊ೦ಡಿತು.
ಜನಸಾಗರ
ರೋಡ್ ಶೋಗೆ ಮಧ್ಯಾಹ್ನ 3 ಗಂಟೆಯಿಂದಲೇ ಬಿಜೆಪಿ ಕಾರ್ಯಕರ್ತರು ಆಗಮಿಸತೊಡಗಿದ್ದರು. ಉಡುಪಿ, ಮ೦ಗಳೂರು ಲೋಕಸಭಾ ಕ್ಷೇತ್ರಗಳಿ೦ದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದು 1 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದು ವಸ್ತುಶಃ ಜನಸಾಗರವಾಗಿ ಪರಿವರ್ತಿತವಾಯಿತು. ಮಾರ್ಗದುದ್ದಕ್ಕೂ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಜನ ಮೋದಿಯವರ ವಾಹನದ ಮೇಲೆ ಪುಷ್ಪಾಚ೯ನೆಗೈದರು. ಪ್ರತಿಯಾಗಿ ಮೋದಿಯವರು ಕೂಡಾ ಜನರತ್ತ ಹೂವಿನ ಎಸಳುಗಳನ್ನು ಎಸೆದರು. ನರೇಂದ್ರ ಮೋದಿ ಅವರು ಮಂಗಳೂರು ವಿಮಾನನಿಲ್ದಾಣದಿಂದ ಲೇಡಿಹಿಲ್ ನ ನಾರಾಯಣ ಗುರು ವೃತ್ತಕ್ಕೆಆಗಮಿಸುವ ಮಾರ್ಗದುದ್ದಕ್ಕೂ ಜನ ಜಮಾಯಿಸಿದ್ದು ಮೋದಿಯವರು ಜನರತ್ತ ಕೈಬೀಸುತ್ತಾ ಬಂದರು.
ಮುಗಿಲು ಮುಟ್ಟಿದ್ದ ಮೋದಿ ಘೋಷಣೆ
ನರೆಂದ್ರ ಮೋದಿ ಅವರು ಲೇಡಿಹಿಲ್ ನ ನಾರಾಯಣ ಗುರು ವೃತ್ತಕ್ಕೆ ಆಗಮಿಸುತ್ತಿದ್ದಂತೆಯೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರಿಂದ ಮೋದಿ ಮೋದಿ ಘೋಷಣೆ ಮೊಳಗತೊಡಗಿತು . ಮೋದಿಯವರು ಜನಸ್ತೋಮದ ಕೈಬೀಸುತ್ತಿದ್ದಂತಯೇ ಘೋಷಣೆ ಮುಗಿಲು ಮುಟ್ಟಿತು.ಮೋದಿಯವರ ಜತೆ ಉಡುಪಿಲೋಕಸಭಾ ಕ್ಷೇತ್ರದ ಅಭ್ಯಥಿ೯ ಕೋಟ ಶ್ರೀನಿವಾಸ ಪೂಜಾರಿ, ಮ೦ಗಳೂರು ಲೋಕಸಭಾ ಕ್ಷೇತ್ರದ ಅಭ್ಯಥಿ೯ ಕ್ಯಾ. ಬೃಜೇಶ್ ಚೌಟ ಉಪಸ್ಥಿತರಿದ್ದರು.
ರೋಡ್ ಶೋ ಸಾಗುವ ಹಾದಿಯಲ್ಲಿ ಅಲ್ಲಲ್ಲಿ ಕರಾವಳಿಯ ಸಾ೦ಸ್ಕೃತಿಕ ಹಿರಿಮೆಯನ್ನು ಸಾರುವ ಹುಲಿ ವೇಷ,ನೃತ್ಯ, ಚೆ೦ಡೆ, ಕುಣಿತ ಭಜನೆ ಮು೦ತಾದ ಸಾ೦ಸ್ಕೃತಿಕ ಕಾಯ೯ಕ್ರಮಗಳನ್ನು ಸ೦ಘಟಿಸಲಾಗಿತ್ತು. ರೋಡ್ ಶೋ ೮.೫೦ಕ್ಕೆ ಕೊನೆಗೊ೦ಡಿತು.
ಬಿಗು ಬಂದೋಬಸ್ತು
ರೋಡ್ ಶೋ ಹಾದಿಯುದ್ದಕ್ಕೂ ಬಿಗು ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದ್ದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪ್ರತಿಯೋರ್ವರನ್ನು ಲೋಹ ಶೋಧಕ ದ್ವಾರದ ಮೂಲಕವೇ ತಪಾಸಣೆಗೊಳಪಡಿಸಿ ಒಳಗೆ ಬಿಡಲಾಗುತ್ತಿತ್ತು. ಸುತ್ತ ಇರುವ ಬಹುಮಹಡಿ ಕಟ್ಟಡಗಳ ಮೇಲೆ ಭದ್ರತಾ ಸಿಬಂದಿಗಳು ಉಪಸ್ಥಿತರಿದ್ದು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ನಿಗಾ ಇರಿಸಿದ್ದರು.
ಝೀರೋ ಟ್ರಾಫಿಕ್
ನರೇಂದ್ರ ಮೋದಿಯವರು ಮೈಸೂರಿನಿ೦ದ ಹೊರಟು ಮಂಗಳೂರು ವಿಮಾನನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದು ಅಲ್ಲಿಂದ ರಸ್ತೆಮಾರ್ಗಮೂಲಕ ಲೇಡಿಹಿಲ್ ನ ನಾರಾಯಣ ಗುರು ವೃತ್ತಕ್ಕೆ ಆಗಮಿಸಿದರು. ಅವರ ಆಗಮನ ಹಾಗೂ ನಿರ್ಗಮನದ ಅವಧಿಯಲ್ಲಿ ರಸ್ತೆಯನ್ನು ಝೀರೋ ಟ್ರಾಫಿಕ್ ಮಾಡಲಾಯಿತು.