ಮಂಗಳೂರು: ಏ.26 ರಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಆಯುಧ ಪರವಾನಿಗೆ ಹೊಂದಿರುವ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅನುಪಮ್ ಅಗ್ರವಾಲ್ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಗೆ ಒಳಪಡುವ ಎಲ್ಲಾ ಬೆಳೆ ರಕ್ಷಣೆಗಾಗಿ ಮತ್ತು ಆತ್ಮ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಚುನಾವಣಾ ಅವಧಿಯಲ್ಲಿ ಠೇವಣಿಯಲ್ಲಿರಿಸಲು ಆದೇಶ ಹೊರಡಿಸಿದ್ದಾರೆ.
ಆತ್ಮ ರಕ್ಷಣೆ ಹಾಗೂ ಕೃಷಿ ರಕ್ಷಣೆಯ ಸಲುವಾಗಿ ಪಡೆದ ಪರವಾನಿಗೆಯಲ್ಲಿರುವ ಎಲ್ಲಾ ಆಯುಧಗಳನ್ನು ದಿನಾಂಕ. 31-03-2024 ರ ಒಳಗೆ ಪರವಾನಿಗೆದಾರರು ಅಧಿಕೃತ ಆಯುಧ ವಿತರಕರಲ್ಲಿ ಅಥವಾ ವ್ಯಾಪ್ತಿಯ ಪೊಲೀಸು ಠಾಣೆಯಲ್ಲಿ ಠೇವಣಿ ಇರಿಸುವಂತೆ ಆದೇಶಿಸಲಾಗಿದೆ.ನ್ಯಾಷನಲ್ ರೈಫಲ್ ಅಸೋಸಿಯೇಷನ್ ಇದರ ಸದಸ್ಯರಾಗಿದ್ದು ಕ್ರೀಡಾ ಉದ್ದೇಶಕ್ಕೆ ಪರವಾನಿಗೆ ಹೊಂದಿರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ.
ಪರವಾನಗಿದಾರರಿಗೆ ಆತ್ಮ ರಕ್ಷಣೆ / ಕೃಷಿ ರಕ್ಷಣೆಗಾಗಿ ಆಯುಧವು ತೀರಾ ಅವಶ್ಯವಿದ್ದು ಪರವಾನಿಗೆ ಅಮಾನತ್ತಿನಿಂದ ವಿನಾಯತಿ ಬೇಕಾದಲ್ಲಿ ದಿನಾಂಕ: 28-03-2024 ರ ಒಳಗಾಗಿ ನೈಜ ದಾಖಲಾತಿಗಳೊಂದಿಗೆ ಕಛೇರಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗುವುದು ನಿಗದಿತ ಅವಧಿಯ ನಂತರ ಸ್ವೀಕೃತಗೊಳ್ಳುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ
ಅಮಾನತ್ತಿನ ಅವಧಿ ಮುಗಿದ ತಕ್ಷಣ ದಿನಾಂಕ: 13-06-2024) ಅಯುಧ ಠೇವಣಿ ಪಡೆದ ಅಧಿಕಾರಿಗಳು , ವಿತರಕರು ಅಂತಹ ಆಯುಧಗಳನ್ನು ಠೇವಣೆದಾರರಿಗೆ ಹಿಂದಿರುಗಿಸುವಂತೆಯೂ ಪರವಾನಿಗೆದಾರರು ತಮ್ಮ ಆಯುಧಗಳನ್ನು ಮರು ಪಡೆದುಕೊಳ್ಳಬಹುದಾಗಿಯೂ ಆದೇಶಿಸಲಾಗಿದೆ.
ಈ ಆದೇಶದನ್ವಯ ನಿಗಧಿತ ಅವಧಿಯಲ್ಲಿ ಅಯುಧವನ್ನು ಠೇವಣಿ ಇರಿಸದೇ ಇದ್ದಲ್ಲಿ ಸಂಬಂಧಪಟ್ಟ ಆಯುಧ ಪರವಾನಗಿದಾರರ ವಿರುದ್ಧ ಕಲಂ 188 ಐಪಿಸಿ ರಂತೆ ಠಾಣಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅನುಪಮ್ ಅಗ್ರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.