ಮಂಗಳೂರು: ಮತದಾನ ನಮ್ಮ ದೇಶದ ದೊಡ್ಡ ಹಬ್ಬ. ಇದು ನಮ್ಮ ಕರ್ತವ್ಯವೆಂದು ಅರಿತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು, ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಮತ ಚಲಾಯಿಸಬೇಕು, ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.
ಅವರು, ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಕುಲಸಚಿವ ಕೆ. ರಾಜು ಮೊಗವೀರ (ಕೆ.ಎ.ಎಸ್), ಭಾರತದಲ್ಲಿ ಸುಮಾರು 96.8 ಕೋಟಿ ಅರ್ಹ ಮತದಾರರಿದ್ದಾರೆ. 19.74 ಕೋಟಿ ಯುವ ಮತದಾರರಿದ್ದಾರೆ. ಆದರೆ, ಇವರಲ್ಲಿ ಕೇವಲ 60% ಅಥವಾ 70% ಶೇಕಡಾ ಜನ ಮಾತ್ರ ಮತಚಲಾಯಿಸುತ್ತಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವೆಲ್ಲರೂ ಮತ ಚಲಾಯಿಸಬೇಕು, ಎಂದು ಕರೆ ನೀಡಿದರು.
ಕುಲಸಚಿವ (ಪರೀಕ್ಷಾಂಗ)ಡಾ. ಎಚ್. ದೇವೆಂದ್ರಪ್ಪ, ಹಣಕಾಸು ಅಧಿಕಾರಿ ಡಾ. ವೈ ಸಂಗಪ್ಪ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ ಗಣೇಶ್ ಸಂಜೀವ್, ಐಕ್ಯೂಎಸಿ ನಿರ್ದೇಶಕ ಪ್ರೊ ಮೊನಿಕಾ ಸದಾನಂದ, ಪುರುಷರ ವಸತಿ ಗೃಹದ ಮೇಲ್ವಿಚಾರಕ ಡಾ. ಗೋವಿಂದ ರಾಜ್ ಹಾಗೂ ಮಹಿಳಾ ವಸತಿಗೃಹದ ಮೇಲ್ವಿಚಾರಕ ಡಾ. ಚಂದ್ರ. ಎಂ ಪಾಲ್ಗೊಂಡಿದ್ದರು.
ಮತದಾರರ ಜಾಗೃತಿ ಅಭಿಯಾನ-2024ರ ಸಂಯೋಜಕ, ರಾಜ್ಯಶಾಸ್ತç ವಿಭಾಗದ ಡಾ. ದಯಾನಂದ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಅಭಿಯಾನದಲ್ಲಿ ಪಾಲ್ಗೊಂಡರು.