ಮ೦ಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಈ ಬಾರಿಯ ದ್ವಿತೀಯ ವರ್ಷದ “ಸ್ಟ್ರೀಟ್ ಫುಡ್ ಫಿಯೆಸ್ಟ”ವು 2024 ರ ಜನವರಿ 24 ರಿಂದ ಐದು ದಿನಗಳ ಕಾಲ ನಡೆಯಲಿದೆ.ಸ್ಟ್ರೀಟ್ ಫುಡ್ ಫಿಯೆಸ್ಟಾದ ಲಾಂಛನವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮ೦ಗಳವಾರ ಬಿಡುಗಡೆಗೊಳಿಸಿದರು.
ಈ ಉತ್ಸವವು “ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವ” ದವರೆಗೆ ಫಿಯೆಸ್ಟಾ ನಡೆಯಲಿದೆ. ಪ್ರತಿ ನಿತ್ಯ ಸಂಜೆ 5 ರಿಂದ ರಾತ್ರಿ 10.30 ರವರೆಗೆ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಕೊನೆಯ ಮೂರು ದಿನ ( ಶುಕ್ರವಾರ ಶನಿವಾರ ಮತ್ತು ಭಾನುವಾರ) ಮಾತ್ರ ಉತ್ಸವವು 3 ಗಂಟೆಯಿಂದ 10.30 ತನಕ ನಡೆಯಲಿದೆ ಎ೦ದು ಶಾಸಕ ವೇದವ್ಯಾಸ್ ಕಾಮತ್ ಅವರು ಲಾಂಛನ ಬಿಡುಗಡೆ ಸಂದರ್ಭದಲ್ಲಿ ಮಾಹಿತಿ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ 2023 ಮಾರ್ಚ್ ನಲ್ಲಿ ನಡೆದ ಮಂಗಳೂರಿನ “ಸ್ಟ್ರೀಟ್ ಫುಡ್ ಫಿಯೆಸ್ಟ” ಸುಮಾರು 150ಕ್ಕೂ ಹೆಚ್ಚು ಆಹಾರ ಮಳಿಗೆಗಳಿಂದ ಲಕ್ಷಾಂತರ ಜನರನ್ನು ಆಕರ್ಷಿಸಿ ಭಾರೀ ಜನ ಮನ್ನಣೆ ಪಡೆಯುವ ಮೂಲಕ ಅತ್ಯಂತ ಯಶಸ್ವಿಯಾಗಿತ್ತು.
ಮಳಿಗೆ ನೋಂದಣಿ:-
ಕಳೆದ ಬಾರಿ 150 ಕ್ಕೂ ಹೆಚ್ಚು ಆಹಾರ ಮಳಿಗೆಗಳು ಬಂದಿದ್ದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ಬಾರಿ 200 ಕ್ಕೂ ಹೆಚ್ಚು ಆಹಾರ ಮಳಿಗೆಗಳು ಬರುವ ನಿರೀಕ್ಷೆಯಿದ್ದು ಆಹಾರ ಮಳಿಗೆಗೆ ಈಗಾಗಲೇ ವಿಚಾರಣೆಗಳು ಆರಂಭವಾಗಿವೆ. ಅದರಂತೆ ಇದೇ ನವೆಂಬರ್ 20ರಂದು ಆಹಾರ ಉತ್ಸವಕ್ಕೆ ಸಂಬಂಧಿಸಿದ ವೆಬ್ಸೈಟ್ ಲೋಕಾರ್ಪಣೆಗೊಳ್ಳಲಿದ್ದು ಅದರಲ್ಲಿ ರಿಜಿಸ್ಟರ್ ಆಗುವ ಮೂಲಕವೇ ತಮ್ಮ ಮಳಿಗೆಗಳನ್ನು ನೋಂದಾಯಿಸಿಕೊಳ್ಳಬೇಕು.
ನಗರದೊಂದಿಗೆ ನೇರ ಸಂಪರ್ಕ ಹೊಂದಿರುವ ಮುಂಬೈ ದೆಹಲಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು “ಬನ್ನಿ ಜೊತೆಗೂಡಿ ಮಂಗಳೂರಿನ ಪ್ರವಾಸೋದ್ಯಮ ಧ್ವಜವನ್ನು ಬಾನೆತ್ತರಕ್ಕೆ ಹಾರಿಸೋಣ” ಎಂಬ ಧ್ಯೇಯ ವಾಕ್ಯದಡಿಯಲ್ಲಿ” ಇನ್ನೂ ಹೆಚ್ಚಿನ ರೀತಿಯಲ್ಲಿ ಆಕರ್ಷಿಸುವ ಯೋಜನೆ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಆ ಮೂಲಕ ಪ್ರವಾಸೋದ್ಯಮಕ್ಕೆ ಹೊಂದಿಕೊಂಡಿರುವ ಇತರ ವಲಯಗಳನ್ನೂ ಬೆಳೆಸುವ ನಿಟ್ಟಿನಲ್ಲಿ ಆಹಾರ ಉತ್ಸವದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಹಿರಿಯರಿಗೆ, ಮಕ್ಕಳಿಗೆ ಕುಟುಂಬ ಸಮೇತ ಬರುವವರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಅಲ್ಲಲ್ಲಿ ಕುಳಿತು ಆಹಾರ ಸವಿಯಲು ಅವಕಾಶ ಕಲ್ಪಿಸಲಾಗುತ್ತದೆ. ಹೆಚ್ಚುವರಿ ಮಕ್ಕಳ ಆಟದ ಜೋನ್ ಸ್ಥಾಪಿಸಲಾಗುತ್ತದೆ.
ಉತ್ಸವದ ಸಮಯದಲ್ಲಿ ಹಲವು ವೇದಿಕೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದಲ್ಲಿ ಆತಿಥ್ಯ ಉದ್ಯಮ, ಸ್ವತಂತ್ರ ಆಹಾರ ಪೂರೈಕೆದಾರರು, ಐಸ್ ಕ್ರೀಮ್ ವಲಯ ಮತ್ತು ಗೃಹ ಉದ್ಯಮ ಸೇರಿದಂತೆ ವಿವಿಧ ವಲಯಗಳ ಭಾಗವಹಿಸುವಿಕೆ ಇರುತ್ತದೆ ಎ೦ದು ಶಾಸಕ ವೇದವ್ಯಾಸ್ ಕಾಮತ್ ಅವರು ವಿವರಿಸಿದರು.
ನಗರದಲ್ಲಿ ವಾಸಿಸುವ ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಕೇರಳದ ಜನರು ತಮ್ಮ ರಾಜ್ಯದ ವಿವಿಧ ಆಹಾರ ಉತ್ಪನ್ನಗಳನ್ನು ಕಳೆದ ಬಾರಿಯಂತೆ ಈ ಬಾರಿಯೂ ಪ್ರದರ್ಶಿಸಲಿದ್ದಾರೆ. ಇನ್ನು ಕಳೆದ ಬಾರಿಯಂತೆ ಕುದುರೆ ಸವಾರಿ, ಒಂಟೆ ಸವಾರಿ, ವಿಂಟೇಜ್ ಕಾರುಗಳ ಪ್ರದರ್ಶನ ನಡೆಯಲಿದೆ. ಸೆಲ್ಫಿ ಕೌಂಟರ್ ಸಹ ಇರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ, ಗಾಯನ, ಮಿಮಿಕ್ರಿ, ಮ್ಯಾಜಿಕ್ ಶೋ, ವಾದ್ಯ ಗೋಷ್ಠಿ, ಬ್ಯಾಂಡ್ ಮ್ಯೂಸಿಕ್, ಫೈರ್ ಡ್ಯಾನ್ಸ್, ಸ್ಟ್ರೀಟ್ ಸರ್ಕಸ್, ಹುಲಿ ನೃತ್ಯ ಮತ್ತು ಮುಂತಾದವುಗಳನ್ನು ಒಳಗೊಂಡಿರುತ್ತದೆ.ಎರಡು ರಸ್ತೆಗಳು ಆಕರ್ಷಕ ಬೆಳಕಿನಿಂದ ಪ್ರಕಾಶಿಸಲ್ಪಡುತ್ತವೆ ಮತ್ತು ಸುಂದರೀಕರಣದ ಭಾಗವಾಗಿ ವರ್ಣರಂಜಿತ ಲ್ಯಾಂಟರ್ನ್ಗಳು ಇರುತ್ತವೆ.
ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ವೇದಿಕೆಗಳಲ್ಲಿ ಆಚರಿಸಲು ಅವಕಾಶ ಮಾಡಿಕೊಡಲಾಗುವುದು. ಆಹಾರ ತಯಾರಕರಿಗೆ ತಮ್ಮ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಲು ಅವಕಾಶವನ್ನು ಒದಗಿಸಲಾಗುತ್ತದೆ .
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ, ಬಿಜೆಪಿ ಮಂಡಲದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಹಾಗೂ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.