ಮ೦ಗಳೂರು: ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಯಲಿರುವ ಬಹು ನಿರೀಕ್ಷಿತ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಯ ಕಛೇರಿಯು ಮಣ್ಣಗುಡ್ಡೆಯ ಎಸ್.ಎಲ್ ಶೇಟ್ ಜುವೆಲ್ಲರ್ಸ್ & ಡೈಮಂಡ್ ಹೌಸ್ ಬಳಿ ಉದ್ಘಾಟನೆಗೊಂಡಿತು.
ನಂತರ ಮಾತನಾಡಿದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿಯವರು, ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಸ್ಟ್ರೀಟ್ ಫುಡ್ ಫಿಯೆಸ್ಟಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಮಳಿಗೆದಾರರು, ಸಾರ್ವಜನಿಕರು, ಈ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.
ಸ್ಟ್ರೀಟ್ ಫುಡ್ ಫಿಯೆಸ್ಟಗೆ ಸಂಬಂಧಿಸಿದಂತೆ ಈಗಾಗಲೇ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಚಾಯ್ ವಾಲಾ ಡಾಲಿ ಎಲ್ಲರ ಪ್ರಮುಖ ಆಕರ್ಷಣೆ ಕೇಂದ್ರವಾಗಿದ್ದು ಇದೇ ರೀತಿಯ ಅನೇಕ ವಿಶಿಷ್ಟಗಳು ಈ ಬಾರಿ ಇರಲಿದೆ. ಜನವರಿ 18ರ ಸಂಜೆ 6 ಗಂಟೆಗೆ ಹಲವು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸ್ಟ್ರೀಟ್ ಫುಡ್ ಫಿಯೆಸ್ಟಗೆ ಅದ್ದೂರಿ ಚಾಲನೆ ದೊರೆಯಲಿದೆ ಎಂದರು.
ಆನ್ ಲೈನ್ ಮೂಲಕ ನೂರಾರು ಸಂಖ್ಯೆಯ ಆಹಾರ ಮಳಿಗೆಗಳು ನೋಂದಾಯಿಕೊಂಡಿದ್ದು, ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಮತ್ತಷ್ಟು ಹೊಸತನಗಳು ಇರಲಿದೆ. ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ, ಪಾರ್ಕಿಂಗ್, ಸಹಿತ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ರೀತಿಯಲ್ಲೂ ವಿಶೇಷ ಆದ್ಯತೆ ನೀಡಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರತಿಷ್ಠಾನದ ಪ್ರಮುಖರಾದ ನರೇಶ್ ಶೆಣೈ, ಲಲಿತ್ ಮೆಂಡನ್, ಕಿರಣ್ ಶೆಣೈ, ಜಗದೀಶ್ ಕದ್ರಿ, ಸಂಜಯ್ ಪೈ , ಮೊದಲಾದವರು ಉಪಸ್ಥಿತರಿದ್ದರು.