19.4 C
Karnataka
Monday, March 3, 2025

ಹಿರಿಯ ಪತ್ರಕರ್ತ ದಿ.ಮನೋಹರ ಪ್ರಸಾದ್ ಸಂಸ್ಮರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಹಾಗೂ ಉದಯವಾಣಿ ಪತ್ರಿಕೆ ಸಹ ಸಂಪಾದಕ ದಿ.ಮನೋಹರ ಪ್ರಸಾದ್ ಅವರ ಸಂಸ್ಮರಣಾ ಕಾರ್ಯಕ್ರಮ ಶನಿವಾರ ಬೆಳಗ್ಗೆ ಪತ್ರಿಕಾ ಭವನದಲ್ಲಿ ನಡೆಯಿತು.
ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದರು. “ಮನೋಹರ್ ಪ್ರಸಾದ್ ನಾಡು ಕಂಡ ಅದ್ಭುತ ಪತ್ರಕರ್ತ. ಅಪಾರವಾದ ಜ್ಞಾನ ಭಂಡಾರ ಅವರಲ್ಲಿತ್ತು. ಉಡುಪಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಬಹುತೇಕ ಎಲ್ಲ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ಅವರು ನಿರೂಪಣೆ ಮಾಡುತ್ತಿದ್ದರು. ಅವರ ನೆನಪಿನಲ್ಲಿ ಹಿರಿಯ ಪತ್ರಕರ್ತ ನಂದಕುಮಾರ್ ಅವರು ಮನೋಹರ್ ಪ್ರಸಾದ್ ಬರೆದಿರುವ “ನಮ್ಮೂರು” ಲೇಖನ ಸರಣಿಯ ಭಾಷಾಂತರ ಕಾರ್ಯಕ್ಕೆ ಇಳಿದಿರುವುದು ಖುಷಿಯ ವಿಚಾರ“ ಎಂದರು.
ನಂದಕುಮಾರ್ ಅವರು ಮನೋಹರ್ ಪ್ರಸಾದ್ ಅವರ ಜೊತೆಗಿನ ಸ್ನೇಹವನ್ನು ಮೆಲುಕು ಹಾಕಿಕೊಂಡರು. ”ಮನೋಹರ್ ಪ್ರಸಾದ್ ಅವರು 10 ವರ್ಷಗಳ ಕಾಲ ಪ್ರತೀ ವಾರ ಸುಮಾರು 520 ಎಪಿಸೋಡ್ ಗಳನ್ನು “ನಮ್ಮೂರು” ಕಾಲಂ ಅನ್ನು ಪತ್ರಿಕೆಗೆ ಬರೆದಿದ್ದರು. ಈ ಮೂಲಕ ತುಳುನಾಡಿನ ಆಹಾರ, ವೈವಿಧ್ಯ, ಪದ್ಧತಿ, ಸಂಸ್ಕೃತಿಯನ್ನು ಪರಿಚಯ ಮಾಡಿದ್ದರು. ಇದನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿ ಮುಂದಿನ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದೇನೆ“ ಎಂದರು.
ಮಾಜಿ ಎಂಎಲ್ ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತಾಡಿ, ”ಮನೋಹರ್ ಪ್ರಸಾದ್ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದವರು. ಎಲ್ಲರೊಂದಿಗೆ ಬೆರೆತು ಸಮಾಜಮುಖಿ ಪತ್ರಕರ್ತರಾಗಿದ್ದ ಮನೋಹರ್ ಅವರು ಬಹಳ ಎತ್ತರಕ್ಕೆ ಬೆಳೆದಿದ್ದರು. ಆ ಕಾಲದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಸಾಧನೆ ಮಾಡಿದ್ದ ಅವರು ಇಂದಿನ ಮಕ್ಕಳಿಗೆ ಮಾದರಿಯಾದವರು. ಹಿಂದೆ ತಂತ್ರಜ್ಞಾನ ಇರಲಿಲ್ಲ, ಈಗ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಇದನ್ನು ಮಕ್ಕಳು ಅರಿತುಕೊಳ್ಳಬೇಕು. ಮನೋಹರ್ ಪ್ರಸಾದ್ ರನ್ನು ಅರ್ಥ ಮಾಡಿಕೊಳ್ಳಬೇಕು ಇದರಿಂದ ಜೀವನದಲ್ಲಿ ಮೇಲೆ ಬರಲು ಸಾಧ್ಯ“ ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತಾಡಿ, ”ಕಳೆದ ವರ್ಷ ಮಾರ್ಚ್ 1ರಂದು ಅಸ್ತಂಗತರಾದ ಮನೋಹರ್ ಪ್ರಸಾದ್ ಅವರನ್ನು ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದು ಅವರು ಪತ್ರಕರ್ತನಾಗಿ ಏರಿರುವ ಎತ್ತರಕ್ಕೆ ಸಾಕ್ಷಿಯಾಗಿದೆ. ಮನೋಹರ್ ಪ್ರಸಾದ್ ಪತ್ರಕರ್ತನ ಇಮೇಜ್ ಬದಲಿಸಿ ಸಿನಿಮಾ ಹೀರೋ ತರಾ ಬದುಕಿದ್ದವರು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದವರು. ಅವರ ಬದುಕು ಇಂದಿನ ಪತ್ರಕರ್ತರಿಗೆ ಮಾದರಿ“ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಜಗನ್ನಾಥ ಶೆಟ್ಟಿ ಬಾಳ, ಸಚಿತಾ ನಂದಗೋಪಾಲ್, ಮಾಧವ ಸುವರ್ಣ ಭಾಗವಹಿಸಿದ್ದರು.
ಹಿರಿಯ ಪತ್ರಕರ್ತ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles