ಕಾಪು :”ನಾವೆಲ್ಲರೂ ಮಾನವೀಯತೆಗೆ ತಲೆಭಾಗಬೇಕು. ಮಾನವ ಧರ್ಮವನ್ನು ಉಳಿಸಿಕೊಳ್ಳಬೇಕು. ಯಾರಿಗೂ ತೊಂದರೆ ಕೊಡದಂತೆ ನಮ್ಮ ಧರ್ಮದ ದಾರಿಯಲ್ಲಿ ನಾವು ಬದುಕಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಭಾನುವಾರ ನಡೆದ ಇತಿಹಾಸ ಪ್ರಸಿದ್ಧ ಶ್ರೀ ಹೊಸಮಾರಿಗುಡಿಯ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಮಾರಿಯಮ್ಮ ಎಲ್ಲರೂ ನೀಡುವ ಹಣ್ಣು, ಹೂವು ಜೊತೆಗೆ ಕೋಳಿಯನ್ನು ಸಹ ಅರ್ಪಿಸಿಕೊಳ್ಳುತ್ತಾಳೆ ಎಂದು ಪುರೋಹಿತರು ಹೇಳಿದರು. ಏಕೆಂದರೆ ಭಕ್ತರು ಭಕ್ತಿಯಿಂದ ನೀಡಿದ್ದನ್ನು ತಾಯಿ ಬೇಡ ಎನ್ನುವುದಿಲ್ಲ. ಭಕ್ತಿಗೆ ದೊಡ್ಡ ಶಕ್ತಿಯಿದೆ” ಎಂದರು.
“ಸರ್ಕಾರದ ಸಹಾಯವಿಲ್ಲದೇ ಭಕ್ತರ ಸಣ್ಣ ಹಾಗೂ ದೊಡ್ಡ ನೆರವಿನಿಂದ ಅತ್ಯದ್ಭುತವಾಗಿ ಮಾರಿಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಇಂತಹ ವಿಜೃಂಭಣೆಯಿಂದ ಕೂಡಿರುವ ದೇವಸ್ಥಾನವನ್ನು ನಾನು ಕರ್ನಾಟಕದಲ್ಲಿ ಎಲ್ಲಿಯೂ ನೋಡಿಲ್ಲ” ಎಂದು ಹೇಳಿದರು.
“ನಾನು ಈ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ದೇವಿಯ ಭಕ್ತವಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಸ್ನೇಹಿತರಾದ ಉದಯ್ ಕುಮಾರ್ ಶೆಟ್ಟಿಯವರು, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ಆಹ್ವಾನ ಮನ್ನಿಸಿ ಬಂದಿದ್ದೇನೆ. ಮುಂಬೈ, ದುಬೈ, ಬೆಂಗಳೂರು ಸೇರಿದಂತೆ ಹೊರ ಊರುಗಳಲ್ಲಿ ಇರುವ ಅನೇಕರು ದೇವಿಯ ಶಕ್ತಿಯ ಸೆಳೆತಕ್ಕೆ ಒಳಗಾಗಿ ಬಂದಿದ್ದೀರಿ. ಇದೇ ತಾಯಿಯ ಪವಾಡ” ಎಂದರು.
“ಇಡೀ ದೇವಸ್ಥಾನದ ಶಿಲ್ಪಕಲೆ ಚೆನ್ನಾಗಿ ಮೂಡಿಬಂದಿದೆ. ಕೆತ್ತನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಇಳಕಲ್ಲಿನ ಕೆಂಪು ಕಲ್ಲನ್ನು ಬಳಸಲಾಗಿದೆ. ನಾನಾ ಭಾಗದ ಜನರು ಕೈ ಜೋಡಿಸಿ ತಾಯಿಯ ಆಶೀರ್ವಾದಕ್ಕೆ ಭಾಜನರಾಗಿದ್ದಾರೆ. ದೇವಸ್ಥಾನ ಇನ್ನೂ ಬೆಳೆಯಲಿ ಎಂದು ಆಶಿಸುತ್ತೇನೆ” ಎಂದರು.
