ಮ೦ಗಳೂರು: ಕರ್ನಾಟಕ ರಾಜ್ಯದಲ್ಲಿ 1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ಸರಕಾರಿ ಅಧಿಕಾರಿ/ನೌಕರ ವರ್ಗದ 26,700 ನಿವೃತ್ತರಿಗೆ 7 ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಫೆ.28 ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಬೃಹತ್ ಪ್ರತಿಭಟನೆ, ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಮುಖ್ಯಮಂತ್ರಿಗಳು 10 ದಿನಗಳ ಒಳಗಡೆ ನಮ್ಮ ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಹೋರಾಟಗಾರರಾದ ಅಣ್ಣಾ ಹಜಾರೆ ಮತ್ತು ಡಾ.ಸಂತೋಷ ಹೆಗಡೆ ಅವರುಗಳ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ, ಹೋರಾಟವನ್ನು ಅನಿರ್ಧಿಷ್ಟ ಅವಧಿಗೆ ನಡೆಸಲು ನಿಶ್ಚಯಿಸಿದ್ದೇವೆ ಎಂದರು.
ಸರಕಾರವು ಸರಕಾರಿ ನೌಕರರಿಗೆ ವೇತನ ಭತ್ಯೆಗಳನ್ನು ಪರಿಷ್ಕರಿಸಲು ಹಾಗೂ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಲು ಡಾ.ಸುಧಾಕರರಾವ್ ಅವರ ನೇತೃತ್ವದಲ್ಲಿ 7 ನೇ ವೇತನ ಆಯೋಗವನ್ನು ರಚಿಸಿತ್ತು. ಇದರ ಆಧಾರದಲ್ಲಿ 01-08-2024ರಿಂದ ವೇತನ ಭತ್ಯೆಗಳ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡಲು ಸರಕಾರ ಆದೇಶ ಮಾಡಿತ್ತು. ವಾಸ್ತವವಾಗಿ 1-07-2022ರಿಂದಲೇ ಜಾರಿಗೊಳಿಸಬೇಕಾಗಿದ್ದು, ಆದರೆ 01-08-2024 ರಿಂದ ಜಾರಿಗೊಳಿಸಿರುವುದರಿಂದ 1-7-2022 ರಿಂದ 31-7-2024 ರ ಅವಧಿಯಲ್ಲಿ 25 ತಿಂಗಳು ಸೇವೆಸಲ್ಲಿಸಿ ನಿವೃತ್ತರಾದ ನೌಕರರಿಗೆ 7 ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ. 7 ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ., ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ ಒಂದೇ ಸಲ ಪಾವತಿಯಂತೆ ಕೊಡಬೇಕು. ಕಳೆದ 5 ತಿಂಗಳುಗಳಿಂದ ಈ ಕುರಿತು ನಿರಂತರವಾಗಿ ನಾನಾ ವಿಧಗಳಲ್ಲಿ ಹೋರಾಟವನ್ನು ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿಗಳು ಒಂದು ವಾರದೊಳಗಾಗಿ ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರಮುಖ ಮಠಾಧೀಶರು, ಸಾಮಾಜಿಕ ಹೋರಾಟಗಾರರಾದ ಬಿ. ಡಿ. ಹಿರೇಮಠ,, ಎಸ್. ಆರ್. ಹಿರೇಮಠ ಮುಂತಾದವರ ಬೆಂಬಲ ಕೋರಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಅನಿರ್ಧಿಷ್ಟಾವಧಿ ಬೃಹತ್ ಪ್ರತಿಭಟನೆ-ಹೋರಾಟ ಸಮಾವೇಶ ನಡೆಸಲಾಗುತ್ತದೆ. ದಕ ಜಿಲ್ಲೆಯಿಂದ 600ಕ್ಕೂ ಅಧಿಕ ಮಂದಿ ಅವರ ಕುಟುಂಬದ ಜತೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿರಿಲ್ ರಾಬರ್ಟ್ ಡಿಸೋಜ ಮಾಹಿತಿ ನೀಡಿದರು.
ಈ ಸಂದರ್ಭ ನಿವೃತ್ತ ಸರಕಾರಿ ನೌಕರರಾದ ಸ್ಟ್ಯಾನಿ ತಾವ್ರೋ, ಮೋಹನ ಬಂಗೇರಾ ತೊಕೊಟ್ಟು, ನಾರಾಯಣ ತಲಪಾಡಿ, ಉಮೇಶ್ ಕುಮಾರ್, ರಾಜಗೋಪಾಲ್ ಸೇರಿದಂತೆ ನಾನಾ ಮಂದಿ ಉಪಸ್ಥಿತರಿದ್ದರು.
ನಿವೃತ್ತ ಸರಕಾರಿ ನೌಕರರ ಸಂಘದ ಬೆಂಬಲ: ನಿವೃತ್ತ ಸರಕಾರಿ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇದರ ಜತೆಯಲ್ಲಿ ವೇತನ ಆಯೋಗ ಶಿಫಾರಸು ಮಾಡಿದಂತೆ ನಿವೃತ್ತ ನೌಕರರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆ ಜಾರಿಗೆ ಬರುವ ತನಕ ಮಾಸಿಕ 500 ವೈದ್ಯಕೀಯ ಭತ್ತೆ ನೀಡುವುದು, 70ರಿಂದ 80 ವರ್ಷ ಪೂರ್ತಿಗೊಳಿಸಿದ ನಿವೃತ್ತರಿಗೆ ಶೇ.10ರಷ್ಟು ಹೆಚ್ಚುವರಿ ಪಿಂಚಣಿಗೆ ಆದೇಶ ನೀಡಬೇಕು ಎಂದು ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಸೀತಾರಾಮ್ ಆಗ್ರಹಿಸಿದ್ದಾರೆ.
…..
