ಮಂಗಳೂರು: ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಎಂಡಿಎಂಎ (Methylene dioxy methamphetamine) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ. ಆರೋಪಿಗಳಿ೦ದ 6 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ.
ಮಂಜೇಶ್ವರ ತಾಲೂಕು ಮಚ್ಚಂಪಾಡಿ, ಸಿ.ಎಮ್. ನಗರ ನಿವಾಸಿ ನವಾಜ್(40) ಹಾಗೂ ಬಂಟ್ವಾಳ ತಾಲೂಕು ಪುದು ನಿವಾಸಿ ಅಜರುದ್ದೀನ್ @ ಅಜರ್(38) ಬ೦ಧಿತ ಆರೋಪಿಗಳು.
ಮಂಗಳೂರು ನಗರದ ಕದ್ರಿ ಪಾರ್ಕ್ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಎಂಡಿಎಂಎ ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ಒಟ್ಟು 120 ಗ್ರಾಂ ತೂಕದ 6,00,000 ರೂ. ಮೌಲ್ಯದ ಎಂಡಿಎಂಎ , 3 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನ, ಸುಝುಕಿ ಅಕ್ಸಿಸ್ ಸ್ಕೂಟರ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 6,83,120/-ಆಗಬಹುದು. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳ ಪೈಕಿ ನವಾಸ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಅಜರುದ್ದೀನ್ @ ಅಜರ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ ಒಂದು ಪ್ರಕರಣ, ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ 2 ಕಳ್ಳತನ ಪ್ರಕರಣ ಸೇರಿ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತದೆ.