ಮಂಗಳೂರು : ಬೆಂಗಳೂರಿನಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 46 ಗ್ರಾಂ ಎಂಡಿಎಂಎ ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಟ್ವಾಳ ತಾಲೂಕು ಲೋರೆಟ್ಟೋ ನಿವಾಸಿ ಅಬ್ದುಲ್ ಸಮದ್ @ ಸಮದ್ @ ಚಮ್ಮು(36) ಬ೦ಧಿತ ಆರೋಪಿ.
ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ಎಂಡಿಎಂಎ ನ್ನು ಖರೀದಿಸಿಕೊಂಡು ಸಾಗಾಟ/ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ನೆಹರೂ ಮೈದಾನದ ಬಳಿಯಲ್ಲಿ ಎಂಡಿಎಂಎ ನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆತನ ವಶದಲ್ಲಿದ್ದ ರೂ. 2,30,000 ರೂ ಮೌಲ್ಯದ 46 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 2,40,500 ರೂ. ಆಗಬಹುದು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಯ ವಿರುದ್ದ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ಹಾಗೂ ಮಾದಕ ವಸ್ತು ಮಾರಾಟದ ಪ್ರಕರಣ ದಾಖಲಾಗಿರುತ್ತದೆ.
ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.