ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜಿರಿಯಾ ದೇಶದ ಪ್ರಜೆಯೋರ್ವನನ್ನು ದಸ್ತಗಿರಿ ಮಾಡಿ ರೂ. 6 ಕೋಟಿ ಮೌಲ್ಯದ 6.300 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮಾದಕ ವಸ್ತುವನ್ನು ಹೊಂದಿದ್ದತೊಕ್ಕೊಟ್ಟು, ಚೆಂಬುಗುಡ್ಡೆ ನಿವಾಸಿ ಹೈದರ್ @ ಹೈದರ್ ಆಲಿ(51) ಎ೦ಬಾತನನ್ನು ಬ೦ಧಿಸಿ ಆತನ ವಶದಿಂದ ರೂ. 75,000/- ಮೌಲ್ಯದ 15 ಗ್ರಾಂ ಮಾದಕ ವಸ್ತು ಎಂಡಿಎಂಎ ನ್ನು ಸ್ವಾಧೀನಪಡಿಸಿಕೊಂಡು ಆತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿತ್ತು.
ಈ ಪ್ರಕರಣದಲ್ಲಿ ಮಾದಕ ವಸ್ತುವನ್ನು ಪೂರೈಕೆ ಮಾಡುವ ಡ್ರಗ್ಸ್ ಪೆಡ್ಲರ್ ಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿ ತನಿಖೆಯನ್ನು ಕೈಗೊಂಡ ಸಮಯ ಆರೋಪಿ ಹೈದರ್ ಆಲಿಗೆ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇನ್ನಿತರ ಡ್ರಗ್ ಪೆಡ್ಲರ್ ಗಳ ಮಾಹಿತಿ ಸಂಗ್ರಹಿಸಿ ಚಾಕಚಾಕ್ಯತೆಯಿಂದ, ತಾಂತ್ರಿಕ ಸಹಾಯದಿಂದ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಮಾದಕ ವಸ್ತುವನ್ನು ಪೂರೈಕೆ ಮಾಡುವ ವ್ಯಕ್ತಿಯು ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜೇರಿಯಾ ದೇಶದ ಪ್ರಜೆ ಎಂದು ತಿಳಿದುಬಂತು. ಅದರ೦ತೆ ಬೆಂಗಳೂರು ನಗರದ ದೊಮ್ಮ ಸಂದ್ರದ ಗೋವಿಂದ ರೆಡ್ಡಿ ಲೇ ಔಟ್ ನ ಬಾಡಿಗೆ ಮನೆಗೆ ದಾಳಿ ನಡೆಸಿ ಮಾದಕ ವಸ್ತುವನ್ನು ಹೊಂದಿದ್ದ ನೈಜಿರಿಯಾ ಪ್ರಜೆ ಪೀಟರ್ ಅಕೆಡಿ ಬೆಲನೋ ಎಂಬಾತನನ್ನು ಪತ್ತೆ ಹಚ್ಚಿ ಆತನ ಮನೆಯಲ್ಲಿ ದಾಸ್ತಾನು ಇರಿಸಿದ್ದ ಒಟ್ಟು 6 ಕೋಟಿ ಮೌಲ್ಯದ 6.310 ಕೆಜಿ ಎಂಡಿಎಂಎ, 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕ, ಒಟ್ಟು 35 ಎಟಿಎಂ/ಡೆಬಿಟ್ ಕಾರ್ಡ್ ಗಳು, 17 ಇನ್ ಅಕ್ಟಿವ್ ಸಿಮ್ ಕಾರ್ಡ್ ಗಳು, 10 ವಿವಿಧ ಬ್ಯಾಂಕ್ ಗಳ ಬ್ಯಾಂಕ್ ಖಾತೆ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.. 6,00,63,500/-ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪೀಟರ್ ಅಕೆಡಿ ಬೆಲನೋವು ಎಂಬಾತನ ವಿರುದ್ಧ ಈ ಹಿಂದೆ ಬೆಂಗಳೂರಿನ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯಲ್ಲಿ 2023 ನೇ ಇಸವಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಈತನು ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಕಡೆಗಳಿಗೆ ಅಲ್ಲದೇ ಕೇರಳ ರಾಜ್ಯಕ್ಕೆ ಕೂಡಾ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದನು. ಈ ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯುವುದು.
ಈ ಮಾದಕ ವಸ್ತು ಎಂಡಿಎಂಎ ಮಾರಾಟ/ಸಾಗಾಟದ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್, ಬಿ ಪಿ ದಿನೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.