ಮಂಗಳೂರು : ಆಟೋ ರಿಕ್ಷಾಗಳ ಬಾಡಿಗೆ ಮೀಟರ್ ನ ಮುದ್ರೆಯನ್ನು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಮಂಗಳೂರು ಆರ್.ಟಿ.ಒ ಕಚೇರಿಯಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತೆ ಶಾಸಕ ವೇದವ್ಯಾಸ ಕಾಮತ್ ಅವರು, ಸಾರಿಗೆ ಮತ್ತು ಮುಜುರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿಯವರಿಗೆ ಮನವಿ ಸಲ್ಲಿಸಿದರು.
ಸದ್ಯ ಈ ಪ್ರಕ್ರಿಯೆ ನಗರದ ಹೊರ ವಲಯದ ಕುಲಶೇಖರದಲ್ಲಿ ನಡೆಯುತ್ತಿರುವುದರಿಂದ ಆಟೋ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ/ಮಾಲಕರ ಸಂಘಗಳ ಒಕ್ಕೂಟವು ಶಾಸಕ ಕಾಮತ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದವು. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದರು.
ಅದರಂತೆ ಇದೀಗ ಶಾಸಕರು, ಸಚಿವರನ್ನು ಭೇಟಿಯಾಗಿ ಸಾರಿಗೆ ಇಲಾಖೆಯ ಸಭೆಯಲ್ಲಿ ಚರ್ಚಿಸಿದಂತೆ ವಾರದ 2 ದಿನ ಮಂಗಳೂರಿನ ಆರ್ ಟಿ ಓ ಕಚೇರಿಯಲ್ಲೇ ತೂಕ ಮತ್ತು ಮಾಪನ ಇಲಾಖೆಗೆ ಸ್ಥಳಾವಕಾಶ ಒದಗಿಸಿಕೊಟ್ಟು ನಗರದ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸುವಂತೆ ಶಾಸಕರು ಮನವಿ ಮಾಡಿದರು.