19.4 C
Karnataka
Sunday, November 24, 2024

ಏಕಬಳಕೆ ಪ್ಲಾಸ್ಟಿಕ್ ತ್ಯಜಿಸಲು ಸಂಕಲ್ಪ ಮಾಡಿ: ಸಚಿವ ಈಶ್ವರ ಖಂಡ್ರೆ

ಧರ್ಮಸ್ಥಳ : ನೀರಲ್ಲಿ ಕರಗದ, ಮಣ್ಣಲ್ಲಿ ಮಣ್ಣಾಗದ, ಸುಟ್ಟರೆ ವಿಷಕಾರಿ ಅಂಶವನ್ನು ಗಾಳಿಗೆ ಸೇರಿಸುವ ಪ್ಲಾಸ್ಟಿಕ್ ಸಮುದಾಯ ಆರೋಗ್ಯಕ್ಕೆ ಮಾರಕವಾಗಿದ್ದು, ಭೂಗ್ರಹ ರಕ್ಷಣೆಗೆ ಎಲ್ಲ ಪ್ರಜ್ಞಾವಂತ ನಾಗರಿಕರು ಏಕ ಬಳಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸಲು ಸಂಕಲ್ಪ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.
ಅವರು ಸೋಮವಾರ ಧರ್ಮಸ್ಥಳದಲ್ಲಿ ಧರ್ಮಸ್ಥಳ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಕ್ಷೇತ್ರ ಫಲಕ ಅನಾವರಣ ಮಾಡಿ ಮಾತನಾಡಿದರು. ಮರುಬಳಕೆ ಪ್ರವೃತ್ತಿ ಜನರಲ್ಲಿ ಕಡಿಮೆ ಆಗಿದ್ದು, ತ್ಯಾಜ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ತ್ಯಾಜ್ಯ ವಿಲೇವಾರಿ ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗಿದೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ದೊಡ್ಡ ಸವಾಲಾಗಿದ್ದು, ಜನರಲ್ಲಿ ಜಾಗೃತಿ ಮೂಡದ ಹೊರತು ಇದಕ್ಕೆ ಪರಿಹಾರ ದೊರಕುವುದು ದುರ್ಲಭ ಎಂದು ಸಚಿವರು ಹೇಳಿದರು.
ಅರಣ್ಯ ನಾಶ, ಪ್ರಕೃತಿಯ ಮೇಲಿನ ದಬ್ಬಾಳಿಕೆಯಿಂದ ಇಂದು ಜಾಗತಿಕ ತಾಪಮಾನ ಏರಿಕೆ ಆಗುತ್ತಿದೆ, ಹವಾಮಾನ ವೈಪರೀತ್ಯದಿಂದ ಜಾಗತಿಕ ಸಮಸ್ಯೆಗಳು ತಲೆದೋರುತ್ತಿವೆ, ಅಭಿವೃದ್ಧಿಯೂ ಆಗಬೇಕು, ಪ್ರಕೃತಿಯೂ ಉಳಿಯಬೇಕು ಹೀಗಾಗಿ ಸುಸ್ಥಿರ ಅಭಿವೃದ್ಧಿ ಇಂದಿನ ಅತ್ಯಗತ್ಯವಾಗಿದೆ ಎಂದು ಹೇಳಿದರು.ಆಹಾರದಲ್ಲಿ ಮಾಲಿನ್ಯ ಇದೆ, ಗಾಳಿಯಲ್ಲಿ ಮಾಲಿನ್ಯ ಇದೆ, ನೀರಿನಲ್ಲಿ ಮಾಲಿನ್ಯ ಇದೆ. ಇದರಿಂದ ಅನೇಕ ರೋಗ ರುಜಿನಗಳು ಜನರನ್ನು ಕಾಡುತ್ತಿದ್ದು, ಸಮುದಾಯ ಆರೋಗ್ಯ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
ಪಾದಯಾತ್ರೆ ವೇಳೆ ಪ್ಲಾಸ್ಟಿಕ್ ನಿಷೇಧ:
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಬರುತ್ತಾರೆ. ಅರಣ್ಯ ಮಾರ್ಗದಲ್ಲಿ ಬರುವಾಗ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ತಟ್ಟೆ, ಲೋಟ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದನ್ನು ವನ್ಯಜೀವಿಗಳು ತಿಂದು ಸಾವಿಗೀಡಾಗುತ್ತವೆ. ಹೀಗಾಗಿ ಈ ಬಾರಿ ಪಾದಯಾತ್ರೆಯಲ್ಲಿ ಬರುವ ಭಕ್ತರು ಅರಣ್ಯ ಪ್ರವೇಶಿಸುವ ಮುನ್ನ ತಪಾಸಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಧರ್ಮಸ್ಥಳ ಸ್ವಚ್ಛ ನಗರಿಯಾಗಿದ್ದು, ಇಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಶ್ರಮಿಸುತ್ತಿದ್ದೇವೆ. ಆದರೆ ಜನರಲ್ಲಿ ಸ್ವಯಂ ಪರಿಸರ ಜಾಗೃತಿ ಮೂಡಿದರೆ ಮಾತ್ರ ಇದನ್ನು ನಿಗ್ರಹಿಸಲು ಸಾಧ್ಯ ಎಂದರು. ಆಧುನಿಕ ಯಂತ್ರಗಳ ನೆರವಿನಿಂದ ತ್ಯಾಜ್ಯವನ್ನು ಸಂಸ್ಕರಿಸಿ ಪುನರ್ ಬಳಕೆ ಮಾಡಲು ಆ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕ್ಷೇತ್ರ ಒತ್ತು ನೀಡಿದೆ ಎಂದು ತಿಳಿಸಿದರು. ಜನರು ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಕರೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles