ಮಂಗಳೂರು: 70 ವರ್ಷದಲ್ಲಿ ಭಾರತವನ್ನು ಸಮೃದ್ಧ ‘ಭಾರತ’ವನ್ನಾಗಿ ಮಾಡಿರುವುದು ಕಾಂಗ್ರೆಸ್. ಪಂಡಿತ್ ಜವಾಹರಲಾಲ್ ನೆಹರು ಅವರು ಭಾರತವನ್ನು ಕಟ್ಟಿದರು. ಇಂದಿರಾ ಗಾಂಧಿ ಅವರು ಭಾರತವನ್ನು ಉಳಿಸಿ ಬೆಳೆಸಿದರು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸೋಮವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನೇತೃತ್ವವನ್ನು ವಹಿಸಿಕೊಂಡು ಭಾರತಕ್ಕೆ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ತಂದು ದೇಶದ ಜನರನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸಿದರು. ನೆಹರೂ ಅವರು ಹಲವು ಬಾರಿ ಸೆರೆವಾಸ ಅನುಭವಿಸಿ ತಮ್ಮ ಸರ್ವ ಸಂಪತ್ತನ್ನು ದೇಶಕ್ಕೆ ವಿನಿಯೋಗಿಸಿ ಹೋರಾಟದಲ್ಲಿ ತೊಡಗಿಸಿದರು. ಸ್ವಾತಂತ್ರ್ಯೋತ್ತರದಲ್ಲಿ ಅವರ ಸಾಧನೆ ಅಗಾಧ. ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ
ತಂದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದರು. ಬಳಿಕ ಇಂದಿರಾ ಗಾಂಧಿ ಅವರು 20 ಅಂಶ ಕಾರ್ಯಕ್ರಮವನ್ನು ತಂದು ಬಡವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿದರು. ರಾಜೀವ್ ಗಾಂಧಿ ಅವರು ವಿಜ್ಞಾನ-ತಂತ್ರಜ್ಞಾನಕ್ಕೆ ಒತ್ತು ನೀಡಿ ಇಂದಿನ ಭಾರತದ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಎಲ್ಲ ಧರ್ಮಗಳಿಗೆ ಗೌರವ ನೀಡುತ್ತಾ ಬಂದಿರುವ ಪಕ್ಷ. ಬಿಜೆಪಿಗೆ ನೇರವಾಗಿ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಧರ್ಮರಾಜಕಾರಣದಿಂದ ಅಧಿಕಾರವನ್ನು ಹಿಡಿದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರ ಕೊಡುಗೆಯೇನು? ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದವರು ನಮ್ಮ ಪೂರ್ವಜರು. ಮಹಾತ್ಮ ಗಾಂಧಿ ಅವರ ರಾಮರಾಜ್ಯ ಕನಸು ನನಸು ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಅಭಿವೃದ್ಧಿಯತ್ತ ರಾಜ್ಯ ಸಾಗುತ್ತಿದ್ದು, ಜನರು ಕಾಂಗ್ರೆಸ್ ಜೊತೆ ಇದ್ದಾರೆ. ಆದುದರಿಂದ ಕಾರ್ಯಕರ್ತರು ಸ್ಥೈರ್ಯಕಳೆದುಕೊಳ್ಳುವ ಅಗತ್ಯವಿಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಮುಂಬರುವ ಲೋಕಸಭಾ
ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆ ಹಾಗೂ ರಾಜ್ಯದಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಮಮತಾ ಗಟ್ಟಿ, ಎಂ.ಎ. ಗಫೂರ್, ಶಾಲೆಟ್ ಪಿಂಟೋ, ಎಸ್.ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶುಭೋದಯ ಆಳ್ವ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜ ವಂದಿಸಿದರು.