ಮ೦ಗಳೂರು: ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಕ್ರೀಡಾಕೂಟವೂ ನಿಯಮಿತವಾಗಿ ನಡೆಯುತ್ತಿದ್ದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಪಂಪ್‌ವೆಲ್-ಬಿ.ಸಿ.ರೋಡ್‌ನ ಎಂಐಟಿಇ ತಾಂತ್ರಿಕ ಶಿಕ್ಷಣ ಸಂಸ್ಥೆ ವತಿಯಿಂದ ಎಕ್ಕೂರು ಮೈದಾನಿನಲ್ಲಿ ಮಂಗಳವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಂತ್ರಿಕ ಶಿಕ್ಷಣಕ್ಕೆ ಇಂದಿನ ಕಾಲದಲ್ಲಿ ಹೆಚ್ಚು ಅವಕಾಶಗಳು ಲಭ್ಯವಿದ್ದು, ಈ ನಿಟ್ಟಿನಲ್ಲಿ ಮಕ್ಕಳು ವಿಶೇಷ ಆಸ್ಥೆ ವಹಿಸಬೇಕು ಎಂದರು.
ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಆಚಾರಪಟ್ಟವರಾದ ಶ್ರೀ ಚೆರಿಯಾಂಡ ಬೆಳ್ಚಪ್ಪಾಡ ಅವರು ಕ್ರೀಡಾಕೂಟ ಉದ್ಘಾಟಿಸಿದರು.
ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಅವರು ಮಾತನಾಡಿ, ಕ್ರೀಡಾಕೂಟಗಳ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ರೂಪುಗೊಳ್ಳುತ್ತದೆ. ಹೀಗಾಗಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಶಿಕ್ಷಣ ಸಂಸ್ಥೆಗಳು ವಿಶೇಷ ಒತ್ತು ನೀಡುತ್ತಿದೆ ಎಂದರು.
ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ತಾಂತ್ರಿಕ ಶಿಕ್ಷಣವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಸ್ತರದಲ್ಲಿ ಉದ್ಯೋಗ ಸಾಧ್ಯತೆಯ ಅವಕಾಶಗಳು ತೆರೆದುಕೊಳ್ಳುತ್ತದೆ. ಈ ಮೂಲಕ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದರು.
ಎಂಐಟಿಇ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರಾಕೇಶ್ ಕುಮಾರ್ ಹಾಗೂ ನಿಶ್ಮಿತಾ ರಾಕೇಶ್, ಕ್ರೀಡಾ ಸಂಯೋಜಕರಾದ ಅಶ್ರ್, ಪ್ರತೀಕ್ ಡಿ.ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಸುಶ್ಮಾ ವಂದಿಸಿದರು. ಗೀತಾ ನಿರೂಪಿಸಿದರು.