20.6 C
Karnataka
Friday, November 22, 2024

ಕಾಂಗ್ರೆಸ್ ಸರಕಾರಕ್ಕೆ ಆಡಳಿತ ವಿರೋಧಿ ಅಲೆ: ಡಾ. ವೈ ಭರತ್ ಶೆಟ್ಟಿ

ಮಂಗಳೂರು: ಕಾಂಗ್ರೆಸ್ ಸರಕಾರ ಹಿಂದಿನ ವಿಧಾನಸಭಾ ಚುನಾವಣೆಯ ಗುಂಗಿನಿಂದಲೇ ಹೊರಬಂದಿಲ್ಲ. ರಾಷ್ಟ್ರೀಯ ಚಿಂತನೆ ಇಲ್ಲದ, ಜಾತಿ ಮತಗಳ ಸಂಕುಚಿತ ಮನಸ್ಥಿತಿಯಿಂದ ಮೇಲೇಳದ ಕಾಂಗ್ರೆಸ್ ಪದೇ ಪದೇ ಮುಗ್ಗರಿಸುತ್ತಿದೆ. ರಾಷ್ಟ್ರೀಯ ಚುನಾವಣೆಯ ರೀತಿಯಲ್ಲಿ ಎದುರಿಸಲು ಸಿದ್ಧವಾಗಿಯೇ ಇಲ್ಲ. ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಮಂಗಳೂರು ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಗೊಂದಲದ ಗೂಡಾಗಿದೆ. ಸರಿಯಾದ ನಾಯಕತ್ವ ಇಲ್ಲದೆ ಕಾಂಗ್ರೆಸ್ ಪಕ್ಷ ದಿಕ್ಕುದೆಸೆ ಇಲ್ಲದಂತಾಗಿದೆ.
ರಾಜ್ಯದ ಜನರಿಗೆ ಸುಳ್ಳುಗಳನ್ನು ಪದೇ ಪದೇ ಹೇಳುತ್ತ ಜನರನ್ನು ಜಾತಿ ಮತದ ಹೆಸರಿನಲ್ಲಿ ಒಡೆಯುವ ಕೆಲಸ ಮಾಡುತ್ತಿದೆ. ತಾನು ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಕಾಂಗ್ರೆಸ್‌ ಸರಕಾರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಯಾವುದೇ ಶಾಸಕರ ಕ್ಷೇತ್ರದಲ್ಲೂ ಒಂದೇ ಒಂದು ಹೊಸ ಯೋಜನೆಗೆ ಗುದ್ದಲಿ ಪೂಜೆಯಾಗಲಿ ಶಿಲಾನ್ಯಾಸ ಆಗಲಿ ನಡೆದಿಲ್ಲ ಎಂದು ಶಾಸಕರು ಟೀಕಿಸಿದರು.

ರಾಜ್ಯ ಈಗ ಬರದ ಸಮಸ್ಯೆಗೆ ಸಿಲುಕಿದೆ. ಆದರೆ ಅದನ್ನು ಸಮರ್ಥವಾಗಿ ಎದುರಿಸುವ ಯಾವುದೇ ಯೋಜನೆಯಾಗಲಿ, ದೂರದೃಷ್ಟಿಯಾಗಲಿ ಕಾಂಗ್ರೆಸ್ ಸರಕಾರಕ್ಕಿಲ್ಲ. ಕೇಂದ್ರ ಸರಕಾರ ಹಣ ಕೊಡುತ್ತಿಲ್ಲ ಎಂದು ಸುಳ್ಳು ಹೇಳುತ್ತ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಹಿಂದಿನ ಯುಪಿಎ ಸರಕಾರವಿದ್ದಾಗ ತೆರಿಗೆ ಹಂಚಿಕೆ ಇದ್ದುದು ಕೇವಲ ಶೇ 30.4ರಷ್ಟಿತ್ತು. ಅದನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಶೇ 40.4ಕ್ಕೆ ಅಂದರೆ ಸುಮಾರು ಶೇ 10ರಷ್ಟು ಏರಿಸಿದೆ. ಆ ಮೂಲಕ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿದೆ ಎಂದು ಭರತ್ ಶೆಟ್ಟಿ ನುಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ನಡೆಯನ್ನು ಗಮನಿಸಿದರೆ, ಚುನಾವಣೆ ಎದುರಿಸುವ ಶಕ್ತಿ ಇಲ್ಲದ ಇವರು ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎ೦ದು ಭರತ್ ಶೆಟ್ಟಿ ಆರೋಪಿಸಿದರು.

ಬಿಜೆಪಿಯ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ಬಾರಿ ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಭರತ್ ಶೆಟ್ಟಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ನಗರದ ಲೇಡಿಹಿಲ್‌ ವೃತ್ತದಿಂದ ನವಭಾರತ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು
ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯ ನಾಯಕರಾದ ವಿಕಾಸ್ ಕುಮಾರ್ ಪುತ್ತೂರು, ಮಹಾನಗರಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ವರುಣ್ ಚೌಟ, ಲೋಹಿತ್ ಅಮೀನ್, ಬಂಟ್ವಾಳ ಚುನಾವಣಾ ಪ್ರಭಾರಿ ಜಗದೀಶ್ ಶೇಣವ, ಜಿಲ್ಲಾ ಮಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles