26.3 C
Karnataka
Saturday, November 23, 2024

ರಾಜ್ಯವನ್ನು ದಿವಾಳಿಯೆಬ್ಬಿಸಿ ಅರಾಜಕತೆ ಸೃಷ್ಟಿಸಿದ ಕಾಂಗ್ರೆಸ್ ಸರಕಾರ: ಡಾ. ವೈ ಭರತ್ ಶೆಟ್ಟಿ

ಮಂಗಳೂರು: ಗ್ಯಾರಂಟಿಗಳ ಆಸರೆಯಿಂದ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ಕಾಂಗ್ರೆಸ್ ಒಂದೇ ವರ್ಗದ ಅತಿಯಾದ ಓಲೈಕೆಯಲ್ಲಿ ತೊಡಗಿದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಮಾ.22ರ೦ದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ದೇಗುಲವೆನಿಸಿದ ವಿಧಾನಸೌಧದ ಒಳಗೆ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಜರುಗಿಸದೆ ದೇಶ ವಿರೋಧಿ ನೀತಿ ಅನುಸರಿಸಿರುವುದು ಸ್ಪಷ್ಟವಾಗಿದೆ. ಆದರೆ ಗೋಹಂತಕರ ವಿರುದ್ಧ ಹೋರಾಡುವ ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ಹಾಕುತ್ತಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಗ್ಯಾರಂಟಿಗಳಿಗೆ ಹಾಗೂ ಜಾಹೀರಾತುಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಬೊಕ್ಕಸವನ್ನು ಬರಿದಾಗಿಸಿ ಆಡಳಿತ ವ್ಯವಸ್ಥೆಯಲ್ಲಿ ವೈಫಲ್ಯ ಉಂಟಾಗಿ ಕಾನೂನು ಸುವ್ಯವಸ್ಥೆ ಕುಸಿದು ಅರಾಜಕತೆ ಸೃಷ್ಟಿಯಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.ಇಡೀ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ ಬರಪರಿಹಾರ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜನರು ವಲಸೆ ಹೋಗುತ್ತಿದ್ದಾರೆ. ಆದರೆ ಸರಕಾರಕ್ಕೆ ಮಾತ್ರ ರೈತರ ಬಗ್ಗೆ ಕಾಳಜಿಯಿಲ್ಲ. ಸರಕಾರ ಕೊಡುವ ಪರಿಹಾರದ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲರ ಹೇಳಿಕೆ ರೈತವಿರೋಧಿ ನಡೆಯಲ್ಲವೇ ಎಂದು ಶಾಸಕರು ಪ್ರಶ್ನಿಸಿದರು.
ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಕಾರ ಮುಚ್ಚುತ್ತಿದೆ. ಟ್ಯಾಂಕರ್ ಮಾಫಿಯಾದ ಜತೆಯಾಗಿ ನೀರಿನ ದರ ದುಪ್ಪಟ್ಟಾಗಿದೆ. ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲಾಗದೆ ಉದ್ಯಮಗಳು ಬಾಗಿಲು ಮುಚ್ಚುವಂತಾಗಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್‌ನ ಜನವಿರೋಧಿ ನೀತಿಯಿಂದ ಜನರ ಬದುಕು ನರಕವಾಗಿದೆ.ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ ಸಂಬಂಧಿಸಿದ 11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಬೇರೆ ಉದ್ದೇಶಕ್ಕೆ ಹಾಗೂ ಗ್ಯಾರಂಟಿಗಳಿಗೆ ಸರಕಾರ ಬಳಸಿಕೊಂಡಿದೆ. ದಲಿತರು, ಶೋಷಿತ ಸಮುದಾಯದವರ ಬಗ್ಗೆ ಸಿದ್ದರಾಮಯಯ್ಯನವರ ಮೊಸಳೆ ಕಣ್ಣೀರಿಗೆ ಇದೇ ಸಾಕ್ಷಿ. ಇದು ದಲಿತ ವಿರೋಧಿ ಸರಕಾರವಾಗಿದ್ದು, ಈ ಸಮುದಾಯಗಳ ಮೇಲಿನ ಅನ್ಯಾಯ ನಿರಂತರವಾಗಿ ನಡೆಯುತ್ತಿದೆ ಎ೦ದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ ಪ್ರಭು, ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಹಿಳಾ ಮೋರ್ಚಾ ಉಪ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಮತ್ತು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles