ಮಂಗಳೂರು: ಈ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ಸ್ಥಳೀಯ ಚುನಾವಣೆಗಳ ವಿಚಾರಗಳೇ ಬೇರೆ. ರಾಷ್ಟ್ರೀಯ ಚುನಾವಣೆಯ ವಿಚಾರಗಳೇ ಬೇರೆ. ರಾಷ್ಟ್ರೀಯತೆಯ ಬಗ್ಗೆ, ದೇಶದ ನಾಯಕತ್ವದ ಬಗ್ಗೆ ಚಿಂತನೆ ಮಾಡಿ ಮತದಾನ ಮಾಡುವ ಸಂದರ್ಭವಿದು. ಇಲ್ಲಿ ಜಾತಿ- ಧರ್ಮದ ಆಧಾರದಲ್ಲಿ ಭಿನ್ನತೆಗಳಿಗೆ ಅವಕಾಶವೇ ಇಲ್ಲ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ಹಿತವೇ ಪರಮೋಚ್ಚವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರೀ ಬಹುಮತದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಬರುವುದು ನಿಶ್ಚಿತ ಎಂದು ಅವರು ನುಡಿದರು.
ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರು, ಇಲ್ಲಿಯೇ ಹುಟ್ಟಿ ಬೆಳೆದು., ಇಲ್ಲಿನ ಅನ್ನ ತಿಂದುಕೊಂಡು ಇಲ್ಲಿಯೇ ಬಾಂಬ್ ಹಾಕುವ ಉಗ್ರರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಇಂತಹ ಪರಿಸ್ಥಿತಿಯನ್ನು ಮಟ್ಟಹಾಕಿ ದೇಶದ ಭದ್ರತೆಯನ್ನು ಗಟ್ಟಿಗೊಳಿಸಿದವರು ಪ್ರಧಾನಿ ನರೇಂದ್ರ ಮೋದಿ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಈದೇಶದ ವೈಭವವನ್ನು ಉತ್ತುಂಗಕ್ಕೆ ಏರಿಸಬೇಕೆಂದು ದೇಶದ ಜನ ಬಯಸಿದ್ದಾರೆ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ 400ಕ್ಕೂ ಅಧಿಕ ಸ್ಥಾನಗಳ ಗೆಲುವಿನೊಂದಿಗೆ ಅವರು ಪ್ರಧಾನಿಯಾಗುವುದು ನಿಶ್ಚಿತ. ಪ್ರಧಾನಿ ಮೋದಿಯವರು ಹೋದಲ್ಲೆಲ್ಲಾ ಪಡೆಯುವ ಗೌರವ, ಜನರ ಪ್ರೀತಿಯನ್ನು ಕಂಡಾಗ ಈ ಗುರಿ ಸಾಧನೆ ಖಂಡಿತವಾಗಿಯೂ ನಿಶ್ಚಿತವಾಗಿದೆ ಎಂದು ಶಾಸಕ ಕೋಟ್ಯಾನ್ ನುಡಿದರು.
ಜನಪ್ರತಿನಿಧಿಯಾದವರು ಅನುದಾನವನ್ನು ತಂದುಕೊಡಲು ಮಾತ್ರ ಸಾಧ್ಯ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕಾದವರು ಸಂಬಂಧಿತ ಅಧಿಕಾರಿಗಳು. ದ.ಕ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಯುವಕನನ್ನು ಸೇನೆಯಲ್ಲಿ ಕೆಲಸ ಮಾಡಿ ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಬಿಜೆಪಿ ಕಣಕ್ಕಿಳಿಸಿದೆ. ಅವರು ಎಲ್ಲ ಭಾಷೆಗಳನ್ನು ಬಲ್ಲವರು. ಹಿಂದೂ ಸಮಾಜೋತ್ಸವಕ್ಕೆ ಜನ ಸೇರುವಂತೆಯೇ ಚೌಟರ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಜನಸ್ತೋಮ ಸೇರಿ ಬೆಂಬಲ ಕೊಟ್ಟಿದೆ. ಖಂಡಿತವಾಗಿಯೂ ಕ್ಯಾ. ಚೌಟರು ಎಲ್ಲ ಕಾರ್ಯಕರ್ತರು- ಮುಖಂಡರ ಪ್ರಯತ್ನದಿಂದ ಕಳೆದ ಬಾರಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲುವುದು ನಿಶ್ಚಿತ. ಯಾವುದೇ ಗೊಂದಲ ನಮ್ಮ ಜಿಲ್ಲೆಯಲ್ಲಿಲ್ಲ. ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಬಾರಿ 30 ಸಾವಿರ ಲೀಡ್ ಕೊಟ್ಟಿದ್ದೇವೆ. ಈ ಬರಿ 50ಕ್ಕೂ ಹೆಚ್ಚಿನ ಲೀಡ್ ಅನ್ನು ತಂದುಕೊಡುತ್ತೇವೆ ಎಂದು ಶಾಸಕ ಕೋಟ್ಯಾನ್ ಹೇಳಿದರು.
ಬಲಿಷ್ಠ ಭಾರತದ ನಿರ್ಮಾಣಕ್ಕೆ, ವಿಶ್ವಗುರು ಆಗಲು ಹಂತ ಹಂತಗಳಲ್ಲಿ ಪ್ರಧಾನಿ ಮೋದಿ ಕೈಗೊಂಡಿದ್ದಾರೆ. ಮಹಾ ಮುತ್ಸದ್ದಿ, ಅಪ್ರತಿಮ ದೇಶಭಕ್ತ ಮೋದಿ ಅವರು ಮತ್ತೊಮ್ಮೆ ಗೆದ್ದು ಬರಲಿದ್ದಾರೆ. ನಾಳೆ ಎಲ್ಲರಿಗೂ ಹಬ್ಬದ ವಾತಾವರಣ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಜನತೆ ಆಗಮಿಸಿ ಅವರಿಗೆ ಸ್ವಾಗತ ಕೋರಲಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್ ವರೆಗೆ ಬೃಹತ್ ರೋಡ್ ಶೋ ನಡೆಯುತ್ತದೆ.
ಸುದ್ದಿಗೋಷ್ಠಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಹಾಗೂ ಬಂಟ್ವಾಳ ಚುನಾವಣಾ ಉಸ್ತುವಾರಿ ಜಗದೀಶ್ ಶೇಣವ ಉಪಸ್ಥಿತರಿದ್ದರು.