ಮ೦ಗಳೂರು: ರಾಜ್ಯ ಸರ್ಕಾರವು ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ ನಂತರ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆಯ ಆಗರದಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುವಂತಾಗಿದ್ದು ಕೂಡಲೇ ಇದನ್ನು ಬಗೆಹರಿಸುವಂತೆ ಶಾಸಕ ವೇದವ್ಯಾಸ ಕಾಮತ್ ರವರು ಕಂದಾಯ ಸಚಿವ ಕೃಷ್ಣ ಭೈರೇಗೌಡರವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಸಮರ್ಪಕವಾಗಿ ಪೂರ್ವಸಿದ್ಧತೆ ಮಾಡದೇ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯಗೊಳಿಸಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವೆಂದು ಖರೀದಿದಾರರು, ಮಾರಾಟಗಾರರು ಆರೋಪಿಸುತ್ತಿದ್ದು ನೋಂದಣಿಗಾಗಿ ದಿನನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದ್ದು ಇ–ಖಾತಾ ಮಾಡಿಸಲು ಜನರು ಪರದಾಡುತ್ತಿರುವ ಬಗ್ಗೆ ಶಾಸಕರು ಸಚಿವರ ಗಮನಕ್ಕೆ ತಂದರು.
ಮಾರಾಟ ಹಾಗೂ ಖರೀದಿಯ ಸಮಸ್ಯೆ ಮಾತ್ರವಲ್ಲದೇ, ಆಸ್ತಿಗಳ ನಕ್ಷೆಯಲ್ಲೂ ದೋಷವುಂಟಾಗಿದೆ. ಯಾವುದೋ ವಾರ್ಡ್ ನಂಬರ್ ನಮೂದಿಸಿದರೆ ಇನ್ಯಾವುದೋ ವಾರ್ಡ್ ನಂಬರ್ ನಮೂದಾಗುತ್ತಿದೆ. ನನ್ನದೇ ಕ್ಷೇತ್ರದ ಸರಿಪಳ್ಳ ಮತ್ತು ಕನ್ನಗುಡ್ಡೆ ಪ್ರದೇಶದಲ್ಲಿ ಇಂತಹ ವ್ಯತ್ಯಾಸಗಳು ಕಂಡು ಬಂದಿದ್ದು ಸಾರ್ವಜನಿಕರು ವಿನಾಕಾರಣ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕೂಡಲೇ ನಗರದಲ್ಲಿ ಉಂಟಾಗಿರುವ ಇ-ತಂತ್ರಾಂಶದ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರು ಆಗ್ರಹಿಸಿದರು.
