ಮ೦ಗಳೂರು: ಭಾರತೀಯ ಜನತಾ ಪಾರ್ಟಿಯು ತನ್ನ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಹಿಂದುಸ್ತಾನ್ ಜಿಂದಾಬಾದ್, ಭಾರತ್ ಮಾತಾಕಿ ಜೈ ಘೋಷಣೆ ಮೂಲಕ ಸಂಭ್ರಮಿಸಿದರೆ, ಕಾಂಗ್ರೆಸ್ ತನ್ನ ರಾಜ್ಯಸಭೆ ಅಭ್ಯರ್ಥಿ ಸೈಯದ್ ನಾಸೀರ್ ಹುಸೇನ್ ಅವರ ಜಯದ ಸಂಭ್ರಮವನ್ನು “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಮೂಲಕ ಆಚರಿಸಿ ತನ್ನ ಓಲೈಕೆ ರಾಜಕಾರಣದ ಅಂತಿಮ ಘಟ್ಟವನ್ನು ಮೀರಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಇದು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಆಘಾತಕಾರಿ ಹಾಗೂ ಕಳವಳಕಾರಿ ಸಂಗತಿಯಾಗಿದೆ. ವಿಧಾನಸೌಧದೊಳಗೆ ಪಾಸ್ ಇಲ್ಲದೇ ಅಷ್ಟು ಸುಲಭವಾಗಿ ಯಾವುದೇ ವ್ಯಕ್ತಿಗಳು ಬರಲು ಸಾಧ್ಯವಿಲ್ಲ. ಹಾಗಾಗಿ ನಾಸೀರ್ ಹುಸೇನ್ ರವರ ಸುತ್ತಮುತ್ತ ಕಾಂಗ್ರೆಸ್ಸಿನ ಪ್ರಮುಖ ಬೆಂಬಲಿಗರೇ ಇದ್ದಿದ್ದು ಅವರೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿದೆ. ಮಾಧ್ಯಮಗಳ ವರದಿ ನಂತರ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾದ ಕಾರಣ, ನಾಸೀರ್ ಹುಸೇನ್ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದವರನ್ನೇ ಅವಮಾನಿಸಿ ದಾಷ್ಟ್ಯ ಮೆರೆದು ಕಾಂಗ್ರೆಸ್ ಪಕ್ಷದ ಸರ್ವಾಧಿಕಾರವನ್ನು ತೋರಿದ್ದಾರೆ ಎಂದರು.
ಮೊನ್ನೆ ತಾನೇ ರಾಜ್ಯದಲ್ಲಿ ನಡೆದ ಸಂವಿಧಾನ ಸಮಾವೇಶಕ್ಕೆ ಭಾರತ ವಿರೋಧಿ, ಪಾಕಿಸ್ತಾನ ಪರ ಮನಸ್ಥಿತಿಯ ವ್ಯಕ್ತಿಗಳನ್ನು ಆಹ್ವಾನಿಸಿದ ಬೆನ್ನಲ್ಲೇ ರಾಜ್ಯದ ಶಕ್ತಿಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿರುವುದು ನೋಡಿದರೆ ಇದರ ಹಿಂದೆ ಭಾರೀ ಷಡ್ಯಂತ್ರ್ಯವೇ ಅಡಗಿರುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ಸಿನ ಈ ನಿಲುವುಗಳಿಗೆ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ಬೆಂಬಲ ವ್ಯಕ್ತವಾಗಿರಬಹುದು, ಆದರೆ ರಾಷ್ಟ್ರಮಟ್ಟದಲ್ಲಿ ರಾಜ್ಯದ ಘನತೆಗೆ ಧಕ್ಕೆಯಾಗಿದೆ ಎ೦ದರು.
ಕೂಡಲೇ ಈ ಎಲ್ಲಾ ಘಟನೆಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ದೇಶದ್ರೋಹದ ಗಂಭೀರ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು.
