ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ 60 ವಾರ್ಡುಗಳಲ್ಲಿ ತೆರೆದ ಚರಂಡಿಗಳಲ್ಲಿರುವ ಹೂಳೆತ್ತಲು ತಕ್ಷಣವೇ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.
ಅವರು ಮಹಾನಗರಪಾಲಿಕೆ ಕಚೇರಿಯಲ್ಲಿ ಮಳೆಗಾಲಕ್ಕೆ ಕೈಗೊಳ್ಳಬಹುದಾದ ಪೂರ್ವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಳೆ ನೀರು ಹರಿದು ಹೋಗುವ ಎಲ್ಲಾ ಚರಂಡಿ, ಮುಖ್ಯ ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ತಕ್ಷಣದಿಂದಲೇ ಹೂಳೆತ್ತಲು ಪ್ರಾರಂಭಿಸಬೇಕು. ಮಳೆ ನೀರು ಸರಾಗವಾಗಿ ಹರಿದು ನದಿ ಮತ್ತು ಸಮುದ್ರಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಸೇರುವಂತಾಗಬೇಕು. ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯ ವಸ್ತುಗಳು ಅಥವಾ ಕಟ್ಟಡದ ಅವಶೇಷಗಳನ್ನು ಮಳೆ ನೀರು ಹರಿಯುವ ಚರಂಡಿ ಅಥವಾ ರಾಜ ಕಾಲುವೆಗಳಿಗೆ ಎಸೆಯಬಾರದು. ಇಂತಹ ಕೃತ್ಯ ಎಸಗುವವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಜನವಸತಿ ಪ್ರದೇಶಗಳಲ್ಲಿ ಚರಂಡಿ ಹೂಳೆತ್ತಲು ಈಗಾಗಲೇ ಆರಂಭಿಸಲಾಗಿದೆ. ಸಾರ್ವಜನಿಕರು ಚರಂಡಿ ಹೂಳೆತ್ತುವ ಸಂಬಂಧ ದೂರುಗಳನ್ನು ನೀಡಲು ಮಹಾನಗರ ಪಾಲಿಕೆ ಸಹಾಯವಾಣಿ (0824-2220306/ ವಾಟ್ಸಾಪ್ ಸಂಖ್ಯೆ:9449007722) ಸಂಪರ್ಕಿಸಬಹುದು ಎಂದು ತಿಳಿಸಿದರು. ಸಭೆಯಲ್ಲಿ ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ನರೇಶ್ ಶಣೈ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
