ಹೊಸದಿಲ್ಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಮ್ಮ ತಂದೆ-ತಾಯಿ ಜತೆಗೆ ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸೌಜನ್ಯದ ಭೇಟಿ ಮಾಡಿದ್ದಾರೆ.
ಕ್ಯಾ. ಚೌಟ ಅವರು ತಂದೆ ಸೇಸಣ್ಣ ಚೌಟ ಹಾಗೂ ತಾಯಿ ಶ್ರೀಮತಿ ಪುಷ್ಪಾ ಚೌಟ ಅವರೊಂದಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾ. ಚೌಟ ಅವರು ತುಳುನಾಡಿನ ಸಂಸ್ಕೃತಿಯ ಸಂಕೇತವಾಗಿರುವ ಪಿಲಿ ನಲಿಕೆಯಲ್ಲಿ ಪ್ರಧಾನವಾಗಿರುವ ‘ಪಿಲಿ ಮಂಡೆ’ ( ಹುಲಿ ವೇಷದ ಮುಖವಾಡ)ಯನ್ನು ಸ್ಮರಣಿಕೆ ರೂಪದಲ್ಲಿ ಪ್ರಧಾನಿಯವರಿಗೆ ನೀಡಿದರು. ಜತೆಗೆ, ಮಂಗಳೂರು ಕಂಬಳದ ಪೋಟೋ ಫ್ರೇಮ್ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದ ಪ್ರಸಾದವನ್ನು ನೀಡಿದರು.
ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಸಂಸದ ಕ್ಯಾ ಚೌಟ, ” ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನನ್ನ ಹೆತ್ತವರ ಜತೆಗೆ ಭೇಟಿ ಮಾಡುವ ಅವಕಾಶ ಲಭಿಸಿರುವುದು ಬದುಕಿನಲ್ಲಿನ ಬಹಳ ಖುಷಿಯ ಹಾಗೂ ಸಂತೃಪ್ತಿಯ ಭಾವವನ್ನು ಮೂಡಿಸಿದೆ. ಅವರೊಂದಿಗಿನ ಈ ಭೇಟಿ ವೇಳೆ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ನಮ್ಮ ಕರಾವಳಿ ಬಗೆಗಿನ ಕಲೆ-ಸಂಸ್ಕೃತಿ, ಪರಂಪರೆ ಬಗ್ಗೆ ಅವರಿಗಿರುವ ಅಗಾಧ ಜ್ಞಾನವು ನನಗೆ ಬಹಳ ಸ್ಫೂರ್ತಿ ಹಾಗೂ ಹೆಮ್ಮೆಯ ಕ್ಷಣವಾಗಿ ಬಹಳ ಕಾಲ ನೆನೆಪಿನಲ್ಲಿ ಉಳಿಯುವಂತೆ ಮಾಡಿದೆ. ವಿಶ್ವದ ಮಹಾನ್ ನಾಯಕರಾಗಿರುವ ಮೋದಿ ಅವರು ನನ್ನ ಬೆನ್ನುತಟ್ಟಿ ನೀಡಿದ ಪ್ರೋತ್ಸಾಹದಾಯಕ ಮಾತುಗಳನ್ನು ನನಗೆ ಜನಸೇವೆಗೆ ಮತ್ತಷ್ಟು ಸ್ಫೂರ್ತಿಯನ್ನು ನೀಡಿದೆ ಎಂದಿದ್ದಾರೆ.
ಈ ಭೇಟಿ ವೇಳೆ ಪ್ರಧಾನಮಂತ್ರಿ ಮೋದಿ ಅವರು ವಿಕಸಿತ ಮಂಗಳೂರು ನಿರ್ಮಾಣಕ್ಕೆ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಅನುಕರಿಸುವ ಬಗ್ಗೆಯೂ ವಿಚಾರ-ವಿನಿಮಯ ಮಾಡಿದ್ದಾರೆ. ಗುಜರಾತ್ ಗೆ ಹೋಲಿಸಿದರೆ ಮಂಗಳೂರು ಕೂಡ ಐತಿಹಾಸಿಕ ವ್ಯಾಪಾರ-ವಹಿವಾಟು, ಬಂದರು ನಗರಿ, ಉದ್ಯಮಶೀಲತೆ ಅಭಿವೃದ್ಧಿ, ಶಿಪ್ಪಿಂಗ್ ಬಿಲ್ಡಿಂಗ್, ಮೀನುಗಾರಿಕೆ, ಆಹಾರ ಸಂಸ್ಕರಣೆ, ಸಾಂಸ್ಕೃತಿ ಸಿರಿವಂತಿಕೆ ಹೀಗೆ ಹಲವಾರು ವಿಚಾರಗಳಲ್ಲಿ ಮಂಗಳೂರು ಮಿನಿ ಗುಜರಾತ್ ಆಗಿ ಬಹಳ ಹತ್ತಿರದ ಸಾಮ್ಯತೆ ಹೊಂದಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಆ ಮೂಲಕ, ಮಂಗಳೂರನ್ನು ಗುಜರಾತ್ ಮಾದರಿ ಅಭಿವೃದ್ಧಿಪಡಿಸುವುದಕ್ಕೆ ಮೋದಿ ಅವರ ಮಾರ್ಗದರ್ಶನವನ್ನು ಕೋರಿರುವುದಾಗಿ ತಿಳಿಸಿದರು.
