20.6 C
Karnataka
Friday, November 22, 2024

ಕಾಂಗ್ರೆಸ್ ಸರಕಾರ ಬಂದಾಗೆಲ್ಲ ಆತಂಕವಾದ ತಾಂಡವ: ನಳಿನ್ ಕುಮಾರ್ ಕಟೀಲ್

ಮಂಗಳೂರು: ರಾಜ್ಯದಲ್ಲಿ ಯಾವಾಗೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬರುತ್ತದೋ ಆಗೆಲ್ಲ ಈ ರಾಜ್ಯದಲ್ಲಿ ಆತಂಕವಾದ ತಾಂಡವವಾಡುತ್ತದೆ. ಕಾಂಗ್ರೆಸ್ ಗೆ ಬಹುಮತ ಬಂದು ಮೆರವಣಿಗೆ ಮಾಡುವಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗುತ್ತದೆ. ರಸ್ತೆಯಲ್ಲಿ ಮೊಳಗಿದ ಆ ಘೋಷಣೆ, ವಿಧಾನ ಸೌಧದೊಳಗೂ ವ್ಯಾಪಿಸುತ್ತದೆ. ದೇಶವಿರೋಧಿ ಹೇಳಿಕೆ ಕೊಟ್ಟವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದರೂ ಅವರನ್ನು ಕಾಂಗ್ರೆಸ್ ಸರಕಾರ ಬಂಧಿಸಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿ, ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮ ಇವತ್ತು ಹಿಂದೂಗಳ ಮೇಲೆ ಅತಿ ಹೆಚ್ಚು ಹಲ್ಲೆಗಳು ಮತ್ತು ಹತ್ಯೆಗಳು ಪ್ರಾರಂಭವಾಗಿವೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ನಿರಂಜನ್ ಹಿರೇಮಠರ ಪುತ್ರಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯ ಹತ್ಯೆ ನಡೆದಿದೆ. ಆ ಹತ್ಯೆಯ ಹಿನ್ನೆಲೆಯನ್ನು ತನಿಖೆ ಮಾಡುವುದಕ್ಕೆ ಮೊದಲೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಹಗುರವಾದ ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯನವರ ಕಾಯಂ ಚಾಳಿ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ ಡಿ.ಕೆ. ಶಿವಕುಮಾರ್ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಆತನಿಗೆ ಉಗ್ರಗಾಮಿ ಸಂಘಟನೆ ಜತೆಗೆ ಲಿಂಕ್ ಇದೆ ಎಂಬುದು ತನಿಖೆಯಿಂದ ಸಾಬೀತಾದಾಗ ವಿಷಯಾಂತರ ಮಾಡುವ ಕೆಲಸ ಮಾಡಿದರು. ಅವತ್ತು ಡಿಜಿಪಿಯವರು ಕುಕ್ಕರ್ ಬಾಂಬ್ ಪ್ರಕರಣ ಭಯೋತ್ಪಾದನಾ ಕೃತ್ಯ ಎಂದು ಹೇಳಿದಾಗ ಡಿಕೆಶಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ನಿರಂತರವಾಗಿ ಈ ಕೃತ್ಯಗಳು ನಡೆಯುವಾಗ ತನಿಖೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ನಳಿನ್ ನುಡಿದರು.
ಡಿಜೆ ಹಳ್ಳಿ, ಕೆ.ಜಿ ಹಳ್ಳಿ ಪ್ರಕರಣ ನಡೆದಾಗ ಕಾಂಗ್ರೆಸ್ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿತು. ಮೊನ್ನೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆದಾಗಲೂ ಅದನ್ನು ತಿರುಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿತು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿಯ ಘಟನೆಗಳು ಜಾಸ್ತಿಯಾಗುತ್ತವೆ. ಕಳೆದ 10 ತಿಂಗಳುಗಳಿಂದ ನಿರಂತರವಾಗಿ ರಾಜ್ಯದ ಹಲವೆಡೆ ಇಂತಹ ಘಟನೆಗಳು ನಡೆಯುತ್ತಲೇ ಬಂದಿವೆ. ಬೆಳಗಾವಿಯಲ್ಲಿ ಸ್ವಾಮೀಜಿಯ ಹತ್ಯೆ ಇರಬಹುದು, ಇದ್ಯಾವುದನ್ನೂ ಕಾಂಗ್ರೆಸ್ ಸರಕಾರ ಪೂರ್ಣ ತನಿಖೆ ನಡೆಸಿಲ್ಲ. ಹಿಂದೆ ನಮ್ಮ ಸರಕಾರ ಇದ್ದಾಗ ಶಿವಮೊಗ್ಗದಲ್ಲಿ ಹರ್ಷ ಹತ್ಯೆ, ಮಂಗಳೂರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಆಯಿತು. ತಕ್ಷಣ ನಮ್ಮ ಸರಕಾರದಿಂದ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ, ಪರಿಹಾರ ನೀಡುವ ಕೆಲಸ ಮಾಡಲಾಯಿತು. ಇವತ್ತು ನೇಹಾ ಕುಟುಂಬಕ್ಕೂ ಸಾಂತ್ವನ ಪರಿಹಾರ ನೀಡಬೇಕು ಎಂದು ನಳಿನ್ ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರಕ್ಕೋಸ್ಕರ ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ತೋರಿಕೆಗಾಗಿ ಎಸ್‌ಡಿಪಿಐಗೆ ಬೈಯ್ಯುತ್ತಿದ್ದ ಕಾಂಗ್ರೆಸ್ ಇಂದು ಬಹಿರಂಗವಾಗಿಯೇ ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ ಎ೦ದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಚುನಾವಣಾ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್ ಅರ್ವಾರ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles