ಗುರುಪುರ : ಮೂಡುಶೆಡ್ಡೆಯ ಶ್ರೀ ಆದಿ ಕ್ಷೇತ್ರ ಜಾರದ ಸಾನಿಧ್ಯದಲ್ಲಿ ನ. ೩೦ರಂದು ಬೆಳಿಗ್ಗೆ ೯ಕ್ಕೆ ಜಾರದ ಕಲ್ಲುರ್ಟಿ ದೈವ, ಸಾರಾಳ ಜುಮಾದಿ(ಧೂಮಾವತಿ) ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ ಬೆಳಿಗ್ಗೆ ೧೧ ಗಂಟೆಗೆ ಶ್ರೀ ಆದಿ ಜಾರ ಕ್ಷೇತ್ರದ ಜಾರದ ಗಿರಿಯಲ್ಲಿ ಗ್ರಾಮದ ದೈವ ಶ್ರೀ ಜಾರಂದಾಯ ಬಂಟ, ಸಾರಾಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೆ ಕ್ಷೇತ್ರದ ತಂತ್ರಿಗಳಾದ ಕೊಂರ್ಗೆಲುಬೈಲು ಲಕ್ಷೀನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ಶಿಲಾನ್ಯಾಸ, ನಿಧಿಕುಂಭ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನ ನಡೆಯಿತು.
ಧಾರ್ಮಿಕ ಪೂಜಾ ವಿಧಿ-ವಿಧಾನಕ್ಕೆ ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಾರ್ಗದರ್ಶನ ನೀಡಿದರು. ಅಂದಾಜು ಮೂರೂವರೆ ಎಕ್ರೆ ಜಾಗದಲ್ಲಿ ಸುಮಾರು ೧೨-೧೫ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಈ ಸಾನಿಧ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಖ್ಯಾತ ವಾಸ್ತುತಜ್ಞ ಮಹೇಶ್ ಮುನಿಯಂಗಳ ವಾಸ್ತು ಮಾರ್ಗದರ್ಶನ ನೀಡಿದ್ದಾರೆ. ನ. ೧೧ರಂದು ಜಾರ ಚಾವಡಿಯಲ್ಲಿ ಪ್ರಧಾನ ದೈವ ಜಾರಂದಾಯ ಬಂಟ ಮಾಯಂದಾಲ್ ದೈವಗಳ ನೇಮೋತ್ಸವ ನಡೆದಿತ್ತು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಮಾಜಿ ಸಚಿವ ಬಿ. ರಮಾನಾಥ ರೈ, ಪ್ರಚಾರ ಸಮಿತಿ ಪ್ರಮುಖ ಸತ್ಯಜಿತ್ ಸುರತ್ಕಲ್, ಉದ್ಯಮಿ ಪದ್ಮನಾಭ ಕೋಟ್ಯಾನ್,ಆಶಿಕ್ ಕುಮಾರ್ ಜೈನ್ ಕೂಳೂರುಬೀಡು,ಯಜಮಾನ ಯೋಗೇಂದ್ರನಾಥ ಜಾರ,ಜಾರ ಕ್ಷೇತ್ರದ ಗಡಿ ಪ್ರದಾನರಾದ ಜತ್ತಿ ಪೂಜಾರಿ ಜಾರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಶಂಕರ್ ಜಾರ, ಪ್ರಧಾನ ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ, ವಿಜಯ್ ಕುಮಾರ್ ಶೆಟ್ಟಿ ಪಂಜಾ ಗುತ್ತು,ಪ್ರಶಾಂತ್ ಪ್ರಸಾದ್ ಜಾರ, ಇನಿತ್ ಕುಮಾರ್ ಜಾರಗುತ್ತು, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಬಬಿತಾ, ಲೀಲಾಕ್ಷ ಕರ್ಕೇರ, ಜೀವನದಾಸ್ ಜಾರದಮನೆ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಊರ ಪರವೂರ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಕಾರಣಿಕದ ಕ್ಷೇತ್ರ ಜಾರ :
ಶ್ರೀ ಆದಿ ಕ್ಷೇತ್ರ ಜಾರ ಇದು ತುಳುನಾಡಿನ ಹಲವು ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾನಿಧ್ಯದಲ್ಲಿ ಪ್ರಧಾನ ದೈವಗಳಾದ ಶ್ರೀ ಉಲ್ಲಾಯ, ಜಾರಂದಾಯ ಬಂಟ, ಸಾರಾಳ ಧೂಮಾವತಿ(ಜುಮಾದಿ) ಬಂಟ, ಕಾಂತೇರಿ ಧೂಮಾವತಿ ಬಂಟ, ಮಾಯಂದಾಲ್, ಪಿಲಿಚಾಮುಂಡಿ, ಬಭಾರ್ಯ, ಕ್ಷೇತ್ರದ ಆದಿ ದೈವಗಳಾದ ಕಲ್ಲುರ್ಟಿ, ಪಟ್ಟದ ಅಣ್ಣಪ್ಪ ಸ್ವಾಮಿ ಸ್ಥಳದ ಪಂಜುರ್ಲಿ, ನಾಗಬ್ರಹ್ಮ ಪ್ರಧಾನ ಸಾನಿಧ್ಯಗಳಾಗಿವೆ.