ಬೆಳ್ತಂಗಡಿ : ಪತಿಯು ಪತ್ನಿಯ ಕತ್ತು ಹಿಸುಕಿ ಆಕೆ ಪ್ರಜ್ಞೆ ತಪ್ಪಿದಾಗ ಬಾವಿಗೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ ಶುಕ್ರವಾರ ಸ೦ಭವಿಸಿದೆ.ಶಶಿಕಲಾ (27) ಕೊಲೆಯಾದವರು.ಸುಧಾಕರ ಕೊಲೆ ಮಾಡಿದ ಆರೋಪಿ.
ಸುಧಾಕರ ಸುಮಾರು 7 ವರ್ಷಗಳ ಹಿಂದೆ ಶಶಿಕಲಾ ಅವರನ್ನು ಪ್ರೀತಿಸಿ ವಿವಾಹವಾಗಿ ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ 6 ವರ್ಷದ ಮಗಳೊಂದಿಗೆ ವಾಸವಾಗಿದ್ದ. ಸುಧಾಕರನಿಗೆ ಅನೈತಿಕ ಸಂಪರ್ಕ ಇದೆಯೆಂದು ಶಶಿಕಲಾ ಮತ್ತು ಸುಧಾಕರನ ಮಧ್ಯೆ ಗಲಾಟೆಯಾಗುತ್ತಿದ್ದು, ಇದೇ ವಿಚಾರದಲ್ಲಿ ಮನೆಯವರು ಬಂದು ಆಗಾಗ ಸಮಾಧಾನ ಪಡಿಸಿ ಹೋಗುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಸುಧಾಕರ ಮತ್ತು ಶಶಿಕಲಾ ಮಧ್ಯೆ ಜಗಳವಾಗಿದ್ದು, ಆ ಸಮಯ ಆತನು ಶಶಿಕಲಾ ಅವರ ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದಾಗ ಶಶಿಕಲಾ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದ್ದರು. ಶಶಿಕಲಾ ಬದುಕಿರಬಾರದೆಂದು ಸುಧಾಕರ ಆಕೆಯನ್ನು ಬಾವಿಗೆ ಎತ್ತಿಹಾಕಿ ಕೊಲೆ ಮಾಡಿದ್ದ ಎ೦ದು ಮೃತಳ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.