24 C
Karnataka
Thursday, January 9, 2025

ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ


ಮಂಗಳೂರು: ಇಂದಿನ ಮಕ್ಕಳು ಭವಿಷ್ಯದಲ್ಲಿ ಗುಣಮಟ್ಟದ ಜೀವನ ನಡೆಸಲು ಉತ್ತಮ ಶಿಕ್ಷಣ ಲಭಿಸಬೇಕಾಗಿದ್ದು, ಇದಕ್ಕಾಗಿ ಪೌಷ್ಠಿಕಯುಕ್ತವಾದ ಸುಧಾರಿತ ಆರೋಗ್ಯ ಹೊಂದಿರಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಂತುಹುಳಗಳು ಮನುಷ್ಯನ ಕರುಳಿನಿಂದ ಆಹಾರವನ್ನು ಪಡೆದು ಜೀವಿಸುವಂತಹ ಉಪಜೀವಿಗಳಾಗಿವೆ. 2024 ಡಿಸೆಂಬರ್ 9 ರಂದು ಜಂತುಹುಳ ನಿವಾರಣಾ ದಿನವಾಗಿ ಆಚರಿಸಲಾಗುತ್ತದೆ. 1ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದರಿಂದ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳ ಮಾತ್ರೆ ನೀಡಲಾಗುತ್ತದೆ. ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ/ಕಾಲೇಜುಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಜಂತುಹುಳ ಮಾತ್ರೆ ಪಡೆಯದೆ ಬಾಕಿ ಇರುವ ಮಕ್ಕಳಿಗೆ ಡಿಸೆಂಬರ್ 16 ರ ಮಾಪ್–ಅಪ್ ದಿನದಂದು ಮಾತ್ರೆ ನೀಡಲಾಗುತ್ತದೆ. ಅಂಗನವಾಡಿಗೆ ದಾಖಲಾಗದ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆ/ಅಂಗನವಾಡಿ ಕಾರ್ಯಕರ್ತೆ/ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮೂಲಕ ಕಡ್ಡಾಯವಾಗಿ ಜಂತುಹುಳ ಮಾತ್ರೆಯನ್ನು ನೀಡಲಾಗುತ್ತದೆ.

ಇದು ಚೀಪುವ ಮಾತ್ರೆಯಾಗಿದ್ದು, ಈ ಮಾತ್ರೆಯನ್ನು ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರ ಉಪಸ್ಥಿತಿಯಲ್ಲಿ ನೀಡಬೇಕು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ನೀಡಲಾಗುತ್ತದೆ.

ಜಂತುಹುಳ ಹರಡಲು ಸಾಧ್ಯತೆಗಳಿರುವ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೈನಂದಿನ ನಡವಳಿಕೆಗಳು:- ಬರಿಕಾಲಿನಲ್ಲಿ ಬಯಲಿನಲ್ಲಿ ಆಟವಾಡುವುದು, ಕೈಗಳನ್ನೇ ತೊಳೆಯದೇ ಆಹಾರ ಸೇವಿಸುವುದು, ಬಾಹ್ಯ ಪ್ರದೇಶದಲ್ಲಿ/ಬಯಲಿನಲ್ಲಿ ಮಲ ವಿಸರ್ಜನೆ, ಶೌಚಾಲಯ ಬಳಸಿದ ನಂತರ ಕೈಗಳನ್ನು ಸರಿಯಾಗಿ ತೊಳೆಯದಿರುವುದು, ತರಕಾರಿ, ಹಣ್ಣುಹಂಪಲುಗಳನ್ನು ತೊಳೆಯದೇ ಸೇವಿಸುವುದು, ಆಹಾರ ಪದಾರ್ಥಗಳನ್ನು ಮುಚ್ಚಿಡದೇ ತೆರೆದಿಡುವುದು.

ಜಂತುಹುಳ ಭಾದೆ ಹೇಗೆ ಹರಡುತ್ತದೆ.?
ಜಂತುಹುಳ ಭಾದೆ ನೈರ್ಮಲ್ಯತೆಯ ಕೊರತೆ ಹಾಗೂ ವೈಯುಕ್ತಿಕ ಶುಚಿತ್ವದ ಕೊರತೆಯಿಂದ ಉಂಟಾಗುತ್ತದೆ – ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳ ಬಾಧೆ ಬರುತ್ತದೆ.

ಜಂತುಹುಳ ಭಾದೆಯ ಲಕ್ಷಣಗಳು:-
ಯಾವ ಮಕ್ಕಳಲ್ಲಿ ಜಂತುಹುಳ ಸಂಖ್ಯೆ ಹೆಚ್ಚಿದೆಯೋ, ಆ ಮಕ್ಕಳಲ್ಲಿ ಜಂತುಹುಳ ಭಾದೆಯ ಲಕ್ಷಣಗಳು ತೀವ್ರವಾಗಿರುತ್ತದೆ. ತೀವ್ರ ಜಂತುಹುಳ ಬಾಧೆಯಿಂದಾಗಿ ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಇಂತಹ ಲಕ್ಷಣಗಳು ಕಂಡುಬರುತ್ತವೆ.ಜಂತುಹುಳ ಸಂಖ್ಯೆ ಕಡಿಮೆ ಇದ್ದವರಲ್ಲಿ ಯಾವುದೇ ತೊಂದರೆಗಳು ಕಾಣಿಸದಿರಲೂ ಬಹುದು. ಜಂತುಹುಳ ಭಾದೆಯಿಂದ ಆರೋಗ್ಯ ಮತ್ತು ಪೌಷ್ಠಿಕತೆಯ ಮೇಲೆ ಉಂಟಾಗುವ ಪರಿಣಾಮಗಳು ಜಂತುಹುಳ ರಕ್ತವನ್ನು ಹೀರುವುದರಿಂದ ಮಕ್ಕಳಲ್ಲಿ ರಕ್ತಹೀನತೆ ಉಂಟಾಗುತ್ತದೆ. ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ಜಂತುಹುಳ ಹೀರುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆ. ಅಪೌಷ್ಟಿಕತೆಯಿಂದಾಗಿ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ.

ಜಂತುಹುಳ ಕರುಳಿನಲ್ಲಿರುವ ವಿಟಮಿನ್ ಎ ಪೌಷ್ಠಿಕಾಂಶವನ್ನು ಹೀರುತ್ತದೆ. ಜಂತುಹುಳ ಭಾದೆಯಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಸಾಮಥ್ರ್ಯದ ಮೇಲೆ ಉಂಟಾಗುವ ಪರಿಣಾಮಗಳು, ಜಂತುಹುಳ ಭಾದೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ತರಾಗುತ್ತಿದ್ದು, ಶಾಲೆಗಳಿಗೆ ಗೈರು ಹಾಜರಾತಿಯಾಗುವುದು ಅಥವಾ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ನೀಡಲು ವಿಫಲರಾಗುತ್ತಾರೆ. ಮಕ್ಕಳ ಶಾರೀರಿಕ ಹಾಗೂ ಭೌದ್ದಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮಥ್ರ್ಯ ಕಡಿಮೆಯಾಗಬಹುದು. ಜಂತುಹುಳ ನಿವಾರಣೆಗೆ ಔಷಧಿ – ವಿಶ್ವ ಸಂಸ್ಥೆಯು ಪ್ರಮಾಣೀಕರಿಸಿದ ಆಲ್ಬೆಂಡಝೋಲ್ 400 ಮಿ. ಗ್ರಾಂ ಮಾತ್ರೆ ಉಚಿತವಾಗಿ ಸಿಗುತ್ತದೆ ಎಂದು ಜಿಲ್ಲಾ ಆರೋಗ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles